Home ರಾಜಕೀಯ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ: ಪರಿಷತ್ ನಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ

ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ: ಪರಿಷತ್ ನಲ್ಲಿ ಕೋಲಾಹಲ, ಕಲಾಪ ಮುಂದೂಡಿಕೆ

49
0

ಬೆಂಗಳೂರು:

ಸಭಾಪತಿ ಪ್ರತಾತ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ವಿಚಾರ ಬುಧವಾರ ವಿಧಾನ ಪರಿಷತ್ ಕಲಾಪದಲ್ಲಿ ಕೋಲಾಹಲ, ಗದ್ದಲಕ್ಕೆ ಕಾರಣವಾಗಿ , ಒಂದು ಗಂಟೆ ಕಾಲ ಸಭೆಯನ್ನು ಮುಂದೂಡಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಯವರು ಶಾಸನ ರಚನೆ ಕಲಾಪ ಕೈಗೆತ್ತಿಕೊಂಡಾಗ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ತಾವೂ ಸೇರಿ ಹನ್ನೊಂದು ಜನ ಸದಸ್ಯರೊಂದಿಗೆ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ. ಆದರೆ ಕಲಾಪ ಪಟ್ಟಿಯಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು, ಈ ಸಂಬಂಧ ನೋಟಿಸ್ ನೀಡಿ 14 ದಿನಗಳು ಪೂರ್ಣಗೊಂಡಿಲ್ಲ. ಆದ್ದರಿಂದ ಇದಕ್ಕೆ ಅವಕಾಶ ನೀಡಬಾರದು ಎಂದು ಪಟ್ಟುಹಿಡಿದರು.

ಆಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಹೀಗೆ ಕಲಾಪದ ಮಧ್ಯೆ ಸೇರಿಸಲಾಗದು. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು, ದಿನಾಂಕ ನಿಗದಿಪಡಿಸಿ ಚರ್ಚೆಗೆ ಕಾಲಾವಕಾಶ ನೀಡಲಾಗುವುದು ಎಂದರು. ಈ ವೇಳೆ ಸಭೆಯಲ್ಲಿ ಗದ್ದಲ ಉಂಟಾಯಿತು. ಪರಿಣಾಮ ಸಭಾಪತಿಗಳು ಕಲಾಪವನ್ನು ಮುಂದೂಡಲಾಯಿತು.

ನ. 25ಕ್ಕೆ ನೋಟಿಸ್ ನೀಡಲಾಗಿದೆ. ಹಾಗಾಗಿ, ನಿಯಮದ ಪ್ರಕಾರ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಇದೆ ಎಂದು ಆಯನೂರು ಮಂಜುನಾಥ್ ಹೇಳಿದರು. ಇದಕ್ಕೆ ಇತರ ಬಿಜೆಪಿ‌ ಸದಸ್ಯರು ದನಿಗೂಡಿಸಿದರು.

ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ನಿಯಮದ ಪ್ರಕಾರ ನೋಟಿಸ್ ನೀಡಿದ 14 ದಿನಗಳು ಪೂರ್ಣಗೊಂಡ ನಂತರವೇ ಇದಕ್ಕೆ ಅವಕಾಶ ನೀಡಬಹುದು ಎಂದು ಸ್ಪಷ್ಟಪಡಿಸಿದರು. ಪ್ರತಿಪಕ್ಷ ನಾಯಕರು ಸೇರಿ, ಇತರ ಸದಸ್ಯರು ದನಿಗೂಡಿಸಿದರು.

ಮಧ್ಯಪ್ರವೇಶಿಸಿದ ಸಭಾಪತಿಗಳು, ನಿಯಮ 165 (2) ರಡಿ ಕಲಾಪ ಪಟ್ಟಿಯಲ್ಲಿ ಇಲ್ಲದಿರುವ ವಿಷಯವನ್ನು ಮಧ್ಯೆ ಸೇರಿಸಲು ಬರುವುದಿಲ್ಲ. ಅಷ್ಟೇ ಅಲ್ಲ, ಇದನ್ನು ಕೈಗೆತ್ತಿಕೊಳ್ಳುವುದು ನನ್ನ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲ ಉಂಟಾಯಿತು. ಆಗ ಸಭಾಪತಿ ಕಲಾಪವನ್ನು ಒಂದು ಗಂಟೆ ಕಾಲ ಮುಂದೂಡಿದರು.

LEAVE A REPLY

Please enter your comment!
Please enter your name here