“ನನ್ನ ಮತ್ತು ಸಿದ್ದರಾಮಯ್ಯ ನಡುವೆ ಗುಂಪು ಎಲ್ಲಿದೆ?”: ಮಾಧ್ಯಮ ವರದಿಗಳ ವಿರುದ್ಧ ಡಿಕೆ ಶಿವಕುಮಾರ್ ತಿರುಗೇಟು
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಗುಂಪು ರಾಜಕೀಯ ಇದೆ ಎಂಬ ಮಾತುಗಳನ್ನು ತಳ್ಳಿಹಾಕಿ, ತಮ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಮತ್ತು ಸಿದ್ದರಾಮಯ್ಯ ಒಟ್ಟಿಗೇ ಇದ್ದೇವೆ. ಪ್ರತಿದಿನ ಜತೆಗೂಡಿ ಚರ್ಚೆ ಮಾಡುತ್ತೇವೆ. ನಮ್ಮಲ್ಲಿ ಗುಂಪು ಎಂಬುದೇ ಇಲ್ಲ. 139 ಶಾಸಕರು ಎಲ್ಲರೂ ನಮ್ಮವರೇ. ಮಾಧ್ಯಮಗಳೇ ಅನಾವಶ್ಯಕವಾಗಿ ಗುಂಪು ಸೃಷ್ಟಿ ಮಾಡುತ್ತಿವೆ,” ಎಂದು ಹೇಳಿದರು.
ಗುಂಪು ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ಸಿದ್ದರಾಮಯ್ಯ ಗುಂಪು, ನನ್ನ ಗುಂಪು ಎಂದು ನಾವು ಯಾವಾಗಲಾದರೂ ಹೇಳಿದ್ದೇವೆನಾ? ಯಾರಾದರೂ ಬೋರ್ಡ್ ಹಾಕಿಕೊಂಡಿದ್ದಾರೆಯಾ? ಇವುಗಳೆಲ್ಲ ಮಾಧ್ಯಮಗಳ ಕಲ್ಪನೆ,” ಎಂದು ತಿರುಗೇಟು ನೀಡಿದರು.
ಪಕ್ಷದ ಒಳಗಿನ ನಾಯಕರ ಹೇಳಿಕೆಗಳ ಕುರಿತು ಪ್ರಶ್ನಿಸಿದಾಗ, “ಯಾವ ಗುಂಪೂ ಇಲ್ಲ. ಎಲ್ಲ ಶಾಸಕರು ಕಾಂಗ್ರೆಸ್ ಗುಂಪಿನವರೇ. ಪಕ್ಷದ ಹಿತ ಮತ್ತು ಅಭಿವೃದ್ಧಿಯೇ ನಮ್ಮ ಆದ್ಯತೆ. ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ,” ಎಂದು ತಿಳಿಸಿದರು.
ಕೆಲವರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಮಾತನಾಡುತ್ತಾ, “ಇದು ವೈಯಕ್ತಿಕ ವಿಚಾರವಲ್ಲ. ಪಕ್ಷದ ನಿಯಮಗಳ ಪ್ರಕಾರ, ದೆಹಲಿ ನಾಯಕರ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಪಕ್ಷದ ಶಿಸ್ತು ಮುಖ್ಯ,” ಎಂದು ಹೇಳಿದರು.
ಅಲ್ಪಸಂಖ್ಯಾತರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕಾಂಗ್ರೆಸ್ ಪಕ್ಷವು ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ರೈತರ ಒಳಿತಿಗಾಗಿ ಕೆಲಸ ಮಾಡುತ್ತದೆ,” ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಅವರೊಂದಿಗೆ ನಡೆದ ಚರ್ಚೆ ಕುರಿತು ಮಾತನಾಡಿದ ಅವರು, “2028ರಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಗುರಿ. ನಾವು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಟ್ರಾಫಿಕ್ ಸಮಸ್ಯೆ ಕುರಿತು ಮಾತನಾಡಿದ ಅವರು, “ನೆಲಮಂಗಲದಿಂದ ಗೊರಗುಂಟೆಪಾಳ್ಯವರೆಗೆ ವಾಹನ ದಟ್ಟಣೆ ಕಡಿಮೆ ಮಾಡಲು ಕ್ರಮಗಳ ಬಗ್ಗೆ ಚರ್ಚೆ ಮಾಡಲಾಗಿದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಮೂಲಕ ನಗರಕ್ಕೆ ಬರುವ ವಾಹನಗಳಿಗೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಬಿಸಿನೆಸ್ ಕಾರಿಡಾರ್ ಯೋಜನೆಯೂ ಕೈಗೆತ್ತಿಕೊಳ್ಳಲಾಗಿದೆ,” ಎಂದು ಹೇಳಿದರು.
