ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ ಪಿಂಕ್ ಬೂತ್ ಗೆ ಚಾಲನೆ
ಬೆಂಗಳೂರು:
ಮಹಿಳಾ ತಾರತಮ್ಯ, ದೌರ್ಜನ್ಯವನ್ನು ತಡೆಗಟ್ಟಲು ಅರಿವು ಮೂಡಿಸುವ ಕೆಲಸ ಹೆಚ್ಚಾಗಿ ನಡೆಯಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆಯ ಪಿಂಕ್ ಬೂತ್ ಉದ್ಘಾಟಿಸಿ ಮಾತನಾಡಿದ ಸಚಿವರು, ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಳಲ್ಲೂ ಮಹಿಳೆಯರ ಕೊಡುಗೆ ದೊಡ್ಡದಿತ್ತು. ಮಹಿಳಾ ತಾರತಮ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಗಿಲ್ಲ. ಅತ್ಯಾಚಾರ, ದೌರ್ಜನ್ಯ ಈಗಲೂ ನಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ಕಿತ್ತುಹಾಕಲು ಮಹಿಳಾ ಸಮಾನತೆ, ಹಕ್ಕುಗಳ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕು. ತಮ್ಮನ್ನು ಬೆಂಬಲಿಸುವ ಕಾನೂನುಗಳ ಬಗ್ಗೆ ತಿಳಿಯಬೇಕು ಎಂದರು.
ಮಹಿಳೆಯರ ಮಾಪನ ಮಾಡಿದರೆ ಮಾತ್ರ ಇಡೀ ಸಮಾಜದ ಮಾಪನ ಮಾಡಲು ಸಾಧ್ಯ ಎಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಪ್ರತಿಯೊಬ್ಬರ ಬಾಳಿನಲ್ಲಿ ತಾಯಿ, ಮಡದಿ, ಸಹೋದರಿಯಾಗಿ ಮಹಿಳೆ ವಿಶೇಷ ಪಾತ್ರ ವಹಿಸುತ್ತಾಳೆ ಎಂದರು.
ನವಜಾತ ಶಿಶು ಹಾಗೂ ತಾಯಂದಿರ ಮರಣ ಪ್ರಮಾಣವನ್ನೂ ಶೂನ್ಯಕ್ಕೆ ತರುವ ಗುರಿ ಇಟ್ಟುಕೊಳ್ಳಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ನಿಟ್ಟಿನಲ್ಲಿ ಹೆಚ್ಚು ಕ್ರಮ ವಹಿಸಬೇಕಿದೆ. ಇದಕ್ಕಾಗಿ ಮಾತೃ ವಂದನಾ, ಸುರಕ್ಷಾ ಮೊದಲಾದ ಯೋಜನೆಗಳಿವೆ. ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಅವರ ಪಾತ್ರ ಹೆಚ್ಚಿದೆ ಎಂದರು.
ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಕೋವಿಡ್ ಲಸಿಕೆಯ ಪಿಂಕ್ ಬೂತ್ ಆರಂಭಿಸಲಾಗಿದೆ. ಕೋವಿಡ್ ಲಸಿಕೆಯನ್ನು ಪಿಎಚ್ ಸಿಗಳಲ್ಲಿ ನೀಡಲು ಆರಂಭಿಸಿದ್ದು, ಪ್ರತಿ ದಿನ ಒಂದು ಲಕ್ಷ ಲಸಿಕೆ ನೀಡುವ ಗುರಿ ಇದೆ ಎಂದರು.