ಬೆಂಗಳೂರು, ಜನವರಿ 6: ಹೊಸ ವರ್ಷದ ಸಂಭ್ರಮಾಚರಣೆಗೆ ಕುಟುಂಬ ಸಮೇತ ಹೊರರಾಜ್ಯಕ್ಕೆ ತೆರಳಿದ್ದ ಮನೆಯಲ್ಲೇ, ನಂಬಿಕೆಯ ಹೆಸರಿನಲ್ಲಿ ಕೆಲಸಕ್ಕೆ ಸೇರಿದ್ದ ಮನೆಕೆಲಸದ ಮಹಿಳೆಯೇ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಬೆಂಗಳೂರಿನ ಸದಾಶಿವನಗರದಲ್ಲಿ ಬೆಳಕಿಗೆ ಬಂದಿದೆ.
ಸದಾಶಿವನಗರ ಠಾಣೆ ಪೊಲೀಸರು ಪಶ್ಚಿಮ ಬಂಗಾಳ ಮೂಲದ ಹಾಝೀರಾ ಬೇಗಂ ಹಾಗೂ ಆಕೆಯ ಪತಿ ಶಾಹೀರ್ ಅವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 787 ಗ್ರಾಂ ಚಿನ್ನಾಭರಣ, 291 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ 7 ದುಬಾರಿ ವಾಚ್ಗಳು ಸೇರಿ ಒಟ್ಟು ₹1.37 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸದಾಶಿವನಗರದ ನಿವಾಸಿ ಅಭಿಷೇಕ್ ಅವರ ಮನೆಯಲ್ಲಿ ಹಾಝೀರಾ ಬೇಗಂ ಹಲವು ವರ್ಷಗಳ ಕಾಲ ಮನೆಕೆಲಸ ಮಾಡುತ್ತಿದ್ದಳು. ಮದುವೆಯ ಕಾರಣ ನೀಡಿ ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದಳು. ಆದರೆ ಹೊಸ ವರ್ಷ ಸಮೀಪಿಸುತ್ತಿದ್ದ ವೇಳೆ ಮತ್ತೆ ಕೆಲಸಕ್ಕೆ ಸೇರುವ ಆಸಕ್ತಿ ವ್ಯಕ್ತಪಡಿಸಿದ್ದಳು. ಹಿಂದಿನ ಪರಿಚಯದ ಆಧಾರದ ಮೇಲೆ ಮಾಲಕರು ಆಕೆಯನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದರು.
ಡಿಸೆಂಬರ್ 30ರಂದು, ಅಭಿಷೇಕ್ ಅವರು ಕುಟುಂಬದೊಂದಿಗೆ ಹೊಸ ವರ್ಷದ ಆಚರಣೆಗೆ ತಮಿಳುನಾಡಿಗೆ ತೆರಳಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಹಾಝೀರಾ, ತನ್ನ ಪತಿ ಶಾಹೀರ್ನನ್ನು ಮನೆಗೆ ಕರೆಸಿಕೊಂಡು ಮನೆಯ ಕೀಲಿಯನ್ನು ಬಳಸಿ ಚಿನ್ನಾಭರಣ, ನಗದು ಹಾಗೂ ದುಬಾರಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 31ರಂದು ಮನೆಗೆ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿ, ಅಭಿಷೇಕ್ ಅವರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ, ಕಳ್ಳತನವಾದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಇನ್ನಿತರ ಸಂಪರ್ಕಗಳಿದ್ದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
