ಬೆಂಗಳೂರು:
ತಮ್ಮನ್ನು ಹಣಕ್ಕಾಗಿ ಅಪಹರಿಸಿ, ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ವರ್ತೂರು ಪ್ರಕಾಶ್ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದಾರೆ.
ಹಣಕ್ಕಾಗಿ ದರೋಡೆಕೋರರ ತಂಡವೊಂದು ಕಾರಿನಲ್ಲಿ ಹೋಗುತ್ತಿದ್ದ ತಮ್ಮನ್ನು ಅಪಹರಿಸಿ ಅಜ್ಞಾತ ಸ್ಥಳದಲ್ಲಿಟ್ಟು ಚಿತ್ರಹಿಂಸೆ ನೀಡಿದೆ. ಈ ತಂಡ 30 ಕೋಟಿ ರೂ.ಹಣಕ್ಕಾಗಿ ಬೇಡಿಕೆ ಇಟ್ಟಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೋಲಾರದ ಬೆಗ್ಲಿಹೊಸಹಳ್ಳಿ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್ ಬಳಿ ಕಾರು ಚಾಲಕ ಸುನೀಲ್ ಸಮೇತ ತಮ್ಮನ್ನು ನವೆಂಬರ್ 25ರಂದು ದುಷ್ಕರ್ಮಿಗಳ ತಂಡ ಅಪಹರಣ ಮಾಡಿದೆ. ನಂತರ ಕೈ ಕಾಲು ಕಟ್ಟಿ ಚಿತ್ರಹಿಂಸೆ ನೀಡಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಬಿಡುಗಡೆ ಮಾಡಲು 30 ಕೋಟಿ ರೂ.ಗೆ ತಂಡ ಬೇಡಿಕೆ ಇಟ್ಟಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ನೇಹಿತರಿಗೆ ಕರೆ ಮಾಡಿ 48 ಲಕ್ಷ ರೂ. ಹೊಂದಿಸಿಕೊಟ್ಟ ಬಳಿಕ ಪ್ರಕಾಶ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಹಾಗೂ ಮಕ್ಕಳನ್ನು ಕೊಲ್ಲುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದರು. ಹಾಗಾಗಿ ದೂರು ನೀಡಲು ವಿಳಂಬವಾಯಿತು. ರಾಜ್ಯ ಸರ್ಕಾರದ ಮೇಲೆ ತಮಗೆ ನಂಬಿಕೆ ಇದೆ. ಗೃಹ ಸಚಿವರನ್ನು ಭೇಟಿ ಮಾಡಿ ಅವರಿಗೆ ಘಟನೆಯ ಬಗ್ಗೆ ವಿವರ ನೀಡುತ್ತೇನೆ ಎಂದು ಪ್ರಕಾಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಮಗೆ ಯಾರು ಕೂಡ ಶತ್ರುಗಳಿಲ್ಲ. ತಾವು ಯಾವುದೇ ಉದ್ಯಮ, ವ್ಯವಹಾರ ನಡೆಸುತ್ತಿಲ್ಲ. ಇದು ಹಣಕ್ಕಾಗಿ ನಡೆದ ಕೃತ್ಯ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.