ಬಳ್ಳಾರಿ:
ವಿಶ್ವವಿಖ್ಯಾತ ಹಂಪಿಯಲ್ಲಿ ಈ ವರ್ಷದ ಹಂಪಿ ಉತ್ಸವವನ್ನು ಕೋವಿಡ್ 19 ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸುತ್ತಿದ್ದು, ನವೆಂಬರ್ 13 ರಂದು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲು ತೀರ್ಮಾನಿಸಿದೆ.
ಪ್ರತಿವರ್ಷ ಮೂರು ದಿನಗಳ ಕಾಲ ಹಂಪಿ ಉತ್ಸವ ನಡೆಯುತ್ತಿತ್ತು. ಆದರೆ ಈ ಬಾರಿ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಲಾಗಿದ್ದು, ಕೋವಿಡ್ 19 ಸೋಂಕು ನಿಯಂತ್ರಣ ಕ್ರಮಗಳ ನಡುವೆ ಉತ್ಸವ ಆಯೋಜಿಸಲಾಗುತ್ತಿದೆ.
ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಪ್ರತಿಬಿಂಬಿಸುವ ವೇದಿಕೆ ಕಾರ್ಯಕ್ರಮಗಳು ಇರುವುದಿಲ್ಲ. ಆಚರೆ ಸಂಪ್ರದಾಯಬದ್ಧವಾಗಿ ಸರಳವಾಗಿ ಕಾರ್ಯಕ್ರಮ ಆಚರಿಸಲಾಗುವುದು. ಈ ಬಾರಿ ಕೋವಿಡ್ ನಿಂದಾಗಿ ನ 13ರಂದು ಒಂದೇ ದಿನಕ್ಕೆ ಸೀಮಿತಗೊಳಿಸಲಾಗುವುದು ಎಂದರು.
ಈ ಬಾರಿ ಉತ್ಸವದಲ್ಲಿ ವೇದಿಕೆ ಕಾರ್ಯಕ್ರಮಗಳು ಇರುವುದಿಲ್ಲ. ಬದಲಾಗಿ ನ.13ರಂದು ಸಂಜೆ ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷ ದೇವಸ್ಥಾನದ ವರೆಗೆ ಜನಪದ ಕಲಾ ತಂಡಗಳೊಂದಿಗೆ ವಿರೂಪಾಕ್ಷ ದೇವರ ಮೂರ್ತಿಯ ಶೊಭಾಯಾತ್ರೆ ನಡೆಯಲಿದೆ. ಇದರಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಎರಡೆರೆಡು ಜನಪದ ಕಲಾ ತಂಡಗಳು ಪಾಲ್ಗೊಳ್ಳಲಿವೆ.
ತರುವಾಯ ವಿರೂಪಾಕ್ಷ ದೇವಸ್ಥಾನದ ಪಕ್ಷದಲ್ಲಿ ಹರಿಯುವ ತುಂಗಭದ್ರಾ ನದಿ ತಟದಲ್ಲಿ ‘ತುಂಗಾ ಆರತಿ’ ನಡೆಯಲಿದೆ. ಒಟ್ಟು ಕಾರ್ಯಕ್ರಮವನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ. ಮೈಸೂರು ದಸರಾ ಮಹೋತ್ಸವದಂತೆ ಸೋಂಕುನಿಯಂತ್ರಣ ಕ್ರಮಗಳ ಅನ್ವಯ ಹಂಪಿ ಉತ್ಸವ ನಡೆಸಲಾಗುವುದು ಎಂದು ಹೇಳಿದರು.