Home Uncategorized ಬೆಂಗಳೂರಿನಲ್ಲಿ ಮೊದಲ ಮುಂಗಾರು ಪೂರ್ವ ಮಳೆ: ರಾಜಧಾನಿಯಲ್ಲಿ 3.4 ಮಿ.ಮೀ ವರ್ಷಧಾರೆ

ಬೆಂಗಳೂರಿನಲ್ಲಿ ಮೊದಲ ಮುಂಗಾರು ಪೂರ್ವ ಮಳೆ: ರಾಜಧಾನಿಯಲ್ಲಿ 3.4 ಮಿ.ಮೀ ವರ್ಷಧಾರೆ

22
0
Advertisement
bengaluru

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಸೇರಿದಂತೆ ಅಲ್ಲಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಗುರುವಾರ ಸಂಜೆಯಿಂದಲೇ ತುಂತುರು ಹನಿಯ ಸಿಂಚನವಾಗಿ ಮಧ್ಯರಾತ್ರಿ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವು ಮಳೆಯ ಮುನ್ಸೂಚನೆ ನೀಡಿತ್ತು. ಬೇಸಿಗೆ ಬಿಸಿಲಿನ ಝಳದ ನಡುವೆ ಮಳೆಯ ವಾತಾವರಣವು ಮುದ ನೀಡಿದೆ. ಇದು ಬೇಸಿಗೆಯ ಮೊದಲ ಅಕಾಲಿಕ ಮಳೆಯಾಗಿದೆ.
ಬೆಂಗಳೂರಿಗೆ ಬೇಸಿಗೆಯ ಮೊದಲ ಮಳೆಯ ಸ್ಪರ್ಶವಾದಂತಾಗಿದೆ. ಸಂಜೆಯ ವೇಳೆಗೆ ಗಾಳಿಯಿಂದಾಗಿ ಮೋಡಗಳು ನಗರ ಪ್ರದೇಶದಿಂದ ಸ್ವಲ್ಪ ದೂರಕ್ಕೆ ಚದುರಿದ್ದವು. ಮಧ್ಯರಾತ್ರಿ ವೇಳೆಗೆ ನಗರದ ಹಲವು ಭಾಗಗಳಲ್ಲಿ ಸುಮಾರು ಹದಿನೈದು ನಿಮಿಷ ಜೋರು ಸುರಿಯಿತು. 
ಹವಾಮಾನ ವೈಪರೀತ್ಯದ ಪರಿಣಾಮ ನಗರದಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ನಿನ್ನೆ 3.4ಮಿಮೀ ಮಳೆಯಾಗಿದೆ. ಇದು ಮೊದಲ ಮುಂಗಾರು ಪೂರ್ವ ಮಳೆ. ಇತರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಮುಂದಿನ 48 ಗಂಟೆಗಳ ಕಾಲ ಕರ್ನಾಟಕದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯಿದೆ. 
ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಸಮುದ್ರ ಮಟ್ಟದಿಂದ 1.5 ಕಿಲೋ ಮೀಟರ್‌ ಎತ್ತರದವರೆಗೆ ಸುಳಿಗಾಳಿ ನಿರ್ಮಾಣವಾಗಿದೆ. ಎಲ್ಲೆಡೆ ಹೆಚ್ಚಾಗಿದ್ದ ತಾಪಮಾನ ತುಸು ಕಡಿಮೆಯಾಗಿದೆ. ಈ ಅಕಾಲಿಕ ಹವಾಮಾನ ಬದಲಾವಣೆಗಳ ಪರಿಣಾಮ ಮಾರ್ಚ್‌ 17 ರಿಂದ ಮೂರು ದಿನ ನಗರದಲ್ಲಿ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಗರಿಷ್ಠ 33.6 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 19.8 ಡಿಗ್ರಿ ಸೆಲ್ಸಿಯಸ್‌, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಗದಲ್ಲಿ ಗರಿಷ್ಠ 33.1 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 19.8 ಡಿಗ್ರಿ ಸೆಲ್ಸಿಯಸ್‌ ಹಾಗೂ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಗರಿಷ್ಠ 32.5 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.


bengaluru

LEAVE A REPLY

Please enter your comment!
Please enter your name here