ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ‘ಜನಗಣತಿ 2027’ರ ಎರಡನೇ ಹಂತದ ಕಾರ್ಯವನ್ನು ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಂಗಳವಾರದಿಂದ ನಾಲ್ಕು ದಿನಗಳ ತರಬೇತಿ ಕಾರ್ಯಾಗಾರ ಆರಂಭವಾಗಿದೆ ಎಂದು ಅಪರ ಆಯುಕ್ತ ರಾಚಪ್ಪ ತಿಳಿಸಿದ್ದಾರೆ. ಕ್ಷೇತ್ರ ಮಟ್ಟದಲ್ಲಿ ಸೌಜನ್ಯದಿಂದ ವರ್ತಿಸಿ, ನಿಖರ ದತ್ತಾಂಶ ಸಂಗ್ರಹಿಸುವಂತೆ ಅವರು ಸೂಚಿಸಿದರು.
ಜಯನಗರದ ಸಿಐಎಂಎಸ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ/ಪ್ರಭಾರ ಮಟ್ಟದ ಕ್ಲೆರಿಕಲ್/ತಾಂತ್ರಿಕ ಸಹಾಯಕರ ತರಬೇತಿ ಕಾರ್ಯಾಗಾರಕ್ಕೆ ರಾಚಪ್ಪ ಅವರು ಚಾಲನೆ ನೀಡಿದರು.
ಸೌಜನ್ಯ ಮತ್ತು ನಿಖರತೆ
- ಗಣತಿದಾರರು ಗುರುತಿನ ಚೀಟಿ ಧರಿಸಿ, ನಿವಾಸಿಗಳೊಂದಿಗೆ ವಿನಯದಿಂದ ಮಾತನಾಡಬೇಕು.
- ನಿವಾಸಿಗಳ ವಿವರ ಮತ್ತು ಕುಟುಂಬದ ಸದಸ್ಯರ ಸಂಖ್ಯೆಯನ್ನು ಕುಟುಂಬದ ಮುಖ್ಯಸ್ಥರು ಅಥವಾ ಕುಟುಂಬದ ಸದಸ್ಯರಿಂದಲೇ ನೇರವಾಗಿ ಕೇಳಿ ದಾಖಲಿಸಬೇಕು; ಊಹೆಯ ಮೇಲೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಮಾಹಿತಿ ದಾಖಲಿಸಬಾರದು.
- ಧರ್ಮ, ಜಾತಿ ಮತ್ತು ಸಾಮಾಜಿಕ ವಿವರಗಳ ಕಾಲಂಗಳನ್ನು ಅತ್ಯಂತ ಎಚ್ಚರ ಮತ್ತು ಸೂಕ್ಷ್ಮತೆಯಿಂದ ಭರ್ತಿ ಮಾಡಬೇಕು ಹಾಗೂ ಸಂಗ್ರಹಿಸಿದ ದತ್ತಾಂಶದ ಗೋಪ್ಯತೆ ಕಾಪಾಡಬೇಕು.
- ಸರ್ಕಾರಿ ನೌಕರರ ಜೊತೆಗೆ ಖಾಸಗಿ ಮತ್ತು ಅನುದಾನರಹಿತ ಶಾಲಾ-ಕಾಲೇಜುಗಳ ಶಿಕ್ಷಕರು ಮತ್ತು ಸಿಬ್ಬಂದಿಯನ್ನೂ ಈ ಬಾರಿ ಜನಗಣತಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ದೇಶದ ಮೊದಲ ಡಿಜಿಟಲ್ ಜನಗಣತಿ
ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯದ ಜಂಟಿ ನಿರ್ದೇಶಕ ಶಕ್ತಿ ಕುಮಾರ್ ಅವರು, ಜನಗಣತಿ 2027 ದೇಶದ ಪ್ರಥಮ ಸಂಪೂರ್ಣ ಡಿಜಿಟಲ್ ಜನಗಣತಿ ಎಂದು ತಿಳಿಸಿದರು. ಗಣತಿದಾರರು ತಮ್ಮ ಸ್ವಂತ ಮೊಬೈಲ್ ಸಾಧನಗಳ ಮೂಲಕ (BYOD) ‘PE ಆ್ಯಪ್’ ಬಳಸಿ ಆನ್ಲೈನ್ ಮತ್ತು ಆಫ್ಲೈನ್ ವಿಧಾನಗಳಲ್ಲಿ ಮಾಹಿತಿ ಸಂಗ್ರಹಿಸುತ್ತಾರೆ.
ವೇಳಾಪಟ್ಟಿ
- ವೆಬ್ ಪೋರ್ಟಲ್ನಲ್ಲಿ ಸ್ವಯಂ ಗಣತಿ: 2027ರ ಜನವರಿ 10ರಿಂದ 24ರವರೆಗೆ (15 ದಿನ).
- ಗಣತಿದಾರರಿಂದ ಮನೆ ಮನೆ ಪರಿಶೀಲನೆ: ಜನವರಿ 25ರಿಂದ ಫೆಬ್ರವರಿ 28ರವರೆಗೆ (35 ದಿನ).
- ಪುನರ್ ಪರಿಶೀಲನೆ ಸುತ್ತು: ಮಾರ್ಚ್ 1ರಿಂದ 5ರವರೆಗೆ.
ಮೊದಲ ಹಂತದಲ್ಲಿ ಗುರುತಿಸಿದ ತಾಂತ್ರಿಕ ಸಮಸ್ಯೆಗಳು, ಬಿಟ್ಟುಹೋದ ಪ್ರದೇಶಗಳು ಮತ್ತು ಗಡಿ ಅತಿಕ್ರಮಣಗಳನ್ನು ಎಚ್ಎಲ್ಬಿಸಿ ಪೋರ್ಟಲ್ ಮೂಲಕ ಮುಂಚಿತವಾಗಿ ಬಗೆಹರಿಸಬೇಕು ಎಂದು ರಾಚಪ್ಪ ಸೂಚಿಸಿದರು. ಇಡೀ ಪ್ರಕ್ರಿಯೆಯನ್ನು ಸಿಎಂಎಂಎಸ್ ಪೋರ್ಟಲ್ ಮೂಲಕ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಮೊದಲ ಹಂತದ ಮನೆ ಪಟ್ಟಿ ಮತ್ತು ವಸತಿ ಗಣತಿ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ.
ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಸತೀಶ್ ಬಾಬು, ಜನಗಣತಿ ಇಲಾಖೆಯ ಮಾಸ್ಟರ್ ತರಬೇತುದಾರರಾದ ಅನನ್ಯಾ ಮತ್ತು ನಳಿನಿ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.
