ಲಗ್ಗೆರೆಯಲ್ಲಿ ಸಿಲಿಂಡರ್ ಲೀಕೆಜ್ ಬೆಂಕಿ ದುರಂತ; ಮನೆ ಸಂಪೂರ್ಣ ಸುಟ್ಟು ಭಸ್ಮ, ಕುಟುಂಬ ಬೀದಿಗೆ
ಬೆಂಗಳೂರು: ಲಗ್ಗೆರೆಯ ಚೌಡೇಶ್ವರಿ ನಗರದಲ್ಲಿ ಸಿಲಿಂಡರ್ ಲೀಕೆಜ್ನಿಂದ ಉಂಟಾದ ಭಾರೀ ಬೆಂಕಿ ಅವಘಡದಲ್ಲಿ ಮನೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಕುಟುಂಬದವರು ಬೀದಿಗೆ ಬಿದ್ದಂತಹ ದುಸ್ಥಿತಿ ಉಂಟಾಗಿದೆ. ಸುಮಾರು ₹25 ಲಕ್ಷ ಮೌಲ್ಯದ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಸುಮಾರು 10:30ರ ವೇಳೆಗೆ ಈ ಘಟನೆ ನಡೆದಿದ್ದು, ಹೊಸ ಸಿಲಿಂಡರ್ನ್ನು ಮನೆಗೆ ತಂದು ಕನೆಕ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಗ್ಯಾಸ್ ರೆಗ್ಯುಲೇಟರ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಸುಟ್ಟುಹಾಕಿದೆ.
ಘಟನಾ ಸ್ಥಳದ ದೃಶ್ಯಗಳು ಮನಕಲಕುವಂತಿದ್ದು, ಮನೆಯ ಬಾಗಿಲು, ಕಿಟಕಿಗಳು, ಫ್ರಿಡ್ಜ್, ಟಿವಿ, ಸೋಫಾ, ವಾಷಿಂಗ್ ಮಷೀನ್ ಸೇರಿದಂತೆ ಎಲ್ಲಾ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಕರಕಲಾಗಿವೆ. ಸೀಲಿಂಗ್, ಫ್ಯಾನ್ಗಳು ಬೆಂಕಿಯ ಕಾವು ಮತ್ತು ಹೊಗೆಗೆ ಹಾನಿಗೊಳಗಾಗಿದ್ದು, ಕಿಟಕಿಗಳ ಗಾಜುಗಳು ಪುಡಿ ಪುಡಿಯಾಗಿವೆ.
ಕುಟುಂಬದವರು ವರ್ಷಗಳ ಪರಿಶ್ರಮದಿಂದ ಸಂಗ್ರಹಿಸಿದ್ದ ಎಲ್ಲಾ ವಸ್ತುಗಳು ಕ್ಷಣಾರ್ಧದಲ್ಲಿ ಭಸ್ಮವಾಗಿದ್ದು, ತಿನ್ನಲು ಅಗತ್ಯವಾದ ಆಹಾರ ಸಾಮಗ್ರಿಗಳೂ ಸಹ ಸಂಪೂರ್ಣ ಹಾಳಾಗಿವೆ.
ಈ ವೇಳೆ ಮನೆಯ ಮಾಲೀಕರು ತಕ್ಷಣ ಜಾಗೃತಿಯಿಂದ ಬೆಂಕಿ ಹಿಡಿದ ಸಿಲಿಂಡರ್ ಅನ್ನು ಹೊರಗೆ ತೆಗೆದು ಹಾಕಿದ್ದು, ದೊಡ್ಡ ಮಟ್ಟದ ಸ್ಫೋಟವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಯೊಳಗೆ ಮಗು ಇದ್ದ ಹಿನ್ನೆಲೆ ಅವರ ಸಮಯೋಚಿತ ಕ್ರಮವು ದೊಡ್ಡ ಅನಾಹುತವನ್ನು ತಪ್ಪಿಸಿದೆ.
“ಬೆಳಿಗ್ಗೆ ಹೊಸ ಸಿಲಿಂಡರ್ ತಂದು ಕನೆಕ್ಟ್ ಮಾಡಿದ್ದೇವೆ. 10 ನಿಮಿಷಗಳಲ್ಲಿ ರೆಗ್ಯುಲೇಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಮಕ್ಕಳನ್ನು ಹೊರಗೆ ಕರೆದುಕೊಂಡು ಬಂದರೂ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮನೆಯಲ್ಲಿ ಏನೂ ಉಳಿದಿಲ್ಲ,” ಎಂದು ಮನೆ ಮಾಲೀಕರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬೆಂಕಿಯಿಂದ ಎರಡನೇ ಮಹಡಿಯಲ್ಲಿರುವ ಇನ್ನೆರಡು ಮನೆಗಳಿಗೂ ಹಾನಿಯಾಗಿದ್ದು, ಮೂರನೇ ಮಹಡಿ ಹೆಚ್ಚಿನ ಹಾನಿಯಿಂದ ತಪ್ಪಿಸಿಕೊಂಡಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಿಯಂತ್ರಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ಯಾಸ್ ಏಜೆನ್ಸಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ.
ಇದೀಗ ವಾಸಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದ ಕುಟುಂಬ ಸರ್ಕಾರದಿಂದ ಪರಿಹಾರ ನೀಡುವಂತೆ ಮನವಿ ಮಾಡಿದ್ದು, ಮನೆ ಮರುನಿರ್ಮಾಣಕ್ಕೆ ಸಹಾಯ ಮಾಡುವಂತೆ ಕೋರಿದ್ದಾರೆ.
