ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಅಪರ ಆಯುಕ್ತರು (ಅಭಿವೃದ್ಧಿ) ಮೋನಾ ರೋತ್ ಅವರು ಮಂಗಳವಾರ ಹೆಬ್ಬಾಳದ ಭೂಪಸಂದ್ರ ಪ್ರದೇಶದಲ್ಲಿ ‘ವಾರ್ಡ್ ಒನ್’ ಅಭಿಯಾನದಡಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಪಾದಚಾರಿ ಮಾರ್ಗಗಳಿಗೆ ಅಡ್ಡಿಯಾಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಮತ್ತು ಜೋತು ಬಿದ್ದಿರುವ ತಂತಿಗಳನ್ನು ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಪಾದಚಾರಿ ಮಾರ್ಗಗಳಲ್ಲಿನ ವಿದ್ಯುತ್ ಕಂಬಗಳಿಂದ ಜನರ ಓಡಾಟಕ್ಕೆ ಅಡಚಣೆಯಾಗುತ್ತಿರುವುದನ್ನು ಗಮನಿಸಿದ ಅವರು, ಅವುಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಕೆಲವೆಡೆ ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ತಕ್ಷಣ ದುರಸ್ತಿ ಮಾಡುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಪಾದಚಾರಿ ಮಾರ್ಗಗಳನ್ನು ಸರಿಯಾಗಿ ನಿರ್ವಹಿಸಲು ಸೂಚಿಸಿದರು.
ಪರಿಶೀಲಿಸಿದ ಇತರೆ ಕಾಮಗಾರಿಗಳು
- ಗುಂಡಿ ದುರಸ್ತಿ, ರಸ್ತೆ ಗುರುತು, ಸ್ಲ್ಯಾಬ್ ಅಳವಡಿಕೆ ಮತ್ತು ಪಾದಚಾರಿ ಮಾರ್ಗ ಸುಧಾರಣೆ ಕಾಮಗಾರಿಗಳನ್ನು ಪರಿಶೀಲಿಸಿ, ಗುಣಮಟ್ಟ ಕಾಪಾಡಿ ಬಾಕಿ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸೂಚಿಸಿದರು.
- ಜಲಮಂಡಳಿ ಮತ್ತು ಬೆಸ್ಕಾಂ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಬಾಕಿ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಬೇಕು ಎಂದು ತಿಳಿಸಿದರು.
- ಕೊಂಬೆ ಕತ್ತರಿಸಿದ ನಂತರ ಸ್ಥಳದಲ್ಲಿ ಉಳಿದ ಕೊಂಬೆಗಳು ಮತ್ತು ಕಸವನ್ನು ತಕ್ಷಣ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಿದರು.
ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ ಬಾಕಿ ಕಾಮಗಾರಿಗಳನ್ನು ತ್ವರಿತಗೊಳಿಸಬೇಕು ಎಂದು ಅವರು ಹೇಳಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನಿರ್ದೇಶನದಂತೆ ಮತ್ತು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಪರಿಶೀಲನೆ ನಡೆಯಿತು. ಹೆಬ್ಬಾಳ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳು ಹಾಗೂ ಬೆಸ್ಕಾಂ, ಅರಣ್ಯ ಇಲಾಖೆ ಮತ್ತು ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.
