ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ 62 ಸಹಾಯಕ ಕಂದಾಯ ಅಧಿಕಾರಿ (ಎಆರ್ಒ) ಕಚೇರಿಗಳಲ್ಲಿ ನವೆಂಬರ್ 7ರಂದು ಇ-ಖಾತಾ ಓಪನ್ ಹೌಸ್ ನಡೆಯಲಿದೆ ಎಂದು ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಬಾಕಿ ಇರುವ ಇ-ಖಾತಾ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಾಗರಿಕರಿಗೆ ಇ-ಖಾತಾ ಸೇವೆಗಳು ಹೆಚ್ಚು ಸುಲಭವಾಗಿ ದೊರೆಯುವಂತೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಅವರು ಹೇಳಿದ್ದಾರೆ.
ಅಚ್ಚರಿ ಪರಿಶೀಲನೆಗೆ ಸೂಚನೆ
ನಗರ ಪಾಲಿಕೆಗಳ ಆಯುಕ್ತರು, ಜಂಟಿ ಆಯುಕ್ತರು, ಉಪ ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳು ಪರಸ್ಪರ ಸಮನ್ವಯದಲ್ಲಿ ವಿವಿಧ ಎಆರ್ಒ ಕಚೇರಿಗಳಲ್ಲಿ ಅಚ್ಚರಿ ಪರಿಶೀಲನೆ ನಡೆಸಿ ಓಪನ್ ಹೌಸ್ ಕಾರ್ಯನಿರ್ವಹಣೆಯನ್ನು ಪರಿಶೀಲಿಸಬೇಕು ಎಂದು ಸೂಚಿಸಲಾಗಿದೆ.
ಮೌದ್ಗಿಲ್ ಕೂಡ ವಿವಿಧ ಕಚೇರಿಗಳಿಗೆ ಅಚ್ಚರಿ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಕಾರ್ಯಕ್ರಮದ ವೇಳೆ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ತಂಡಗಳು ನಿರಂತರ ಸಮನ್ವಯದಲ್ಲಿದ್ದು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ.
ಈ ಕಾರ್ಯಕ್ರಮವನ್ನು ಆದ್ಯತೆಯ ಮತ್ತು ಮಹತ್ವದ ಜವಾಬ್ದಾರಿಯಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಎಆರ್ಒಗಳು ಮತ್ತು ಇತರ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಆರಂಭಿಸಲಾಗುವುದು ಎಂದು ಮೌದ್ಗಿಲ್ ಎಚ್ಚರಿಸಿದ್ದಾರೆ.
ಇ-ಖಾತಾ ಸಹಾಯವಾಣಿ
ಇ-ಖಾತಾ ಸೇವೆಗಳ ಮಾಹಿತಿಗಾಗಿ ನಗರ ಪಾಲಿಕೆ ಕಂದಾಯ ಇಲಾಖೆಯ 9480683695 ಸಂಖ್ಯೆಯನ್ನು ಸಂಪರ್ಕಿಸಬಹುದು.
