ಬೆಂಗಳೂರು: ಐಟಿ, ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗಿನ ಮಾತುಕತೆಯಲ್ಲಿ, ಕರ್ನಾಟಕದಲ್ಲಿ, ವಿಶೇಷವಾಗಿ ಮಂಗಳೂರು ಹಾಗೂ ಉಡುಪಿಯಲ್ಲಿ, ತನ್ನ ಕಾರ್ಯಾಚರಣೆ ವಿಸ್ತರಿಸುವ ಯೋಜನೆಗಳನ್ನು ಎನ್ಟಿಟಿ ಡೇಟಾ ಸಂಸ್ಥೆ ಹಂಚಿಕೊಂಡಿದೆ ಎಂದು ರಾಜ್ಯ ಸರ್ಕಾರ ಸೋಮವಾರ ತಿಳಿಸಿದೆ.
ಕರ್ನಾಟಕ ಮೂಲದ ನಿವಿಯಸ್ ಸೊಲ್ಯೂಷನ್ಸ್ ಹಾಗೂ ವಿನ್ವೈರ್ ಸಂಸ್ಥೆಗಳನ್ನು ಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿರುವ ಸಂಸ್ಥೆ, ಕರಾವಳಿ ಭಾಗದಲ್ಲಿ ಕೌಶಲಯುಕ್ತ ಪ್ರತಿಭೆಗಳ ಲಭ್ಯತೆಯನ್ನು ಪ್ರಮುಖ ಅನುಕೂಲ ಎಂದು ಉಲ್ಲೇಖಿಸಿದೆ.
“ಬಿಯಾಂಡ್ ಬೆಂಗಳೂರು ಕಾರ್ಯಕ್ರಮದ ಮೂಲಕ ಕೌಶಲ, ಮೂಲಸೌಕರ್ಯ ಹಾಗೂ ಪ್ರಗತಿಪರ ನೀತಿಗಳಲ್ಲಿ ಹೂಡಿಕೆ ಮಾಡಿ ಬಲಿಷ್ಠ ಪ್ರಾದೇಶಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳನ್ನು ರೂಪಿಸುತ್ತಿದ್ದೇವೆ. ಪ್ರತಿಭೆಗಳು ಇರುವಲ್ಲಿಗೆ ಹೂಡಿಕೆ ಹಾಗೂ ಅವಕಾಶಗಳನ್ನು ಕೊಂಡೊಯ್ಯುವುದು ನಮ್ಮ ಗುರಿ” ಎಂದು ಖರ್ಗೆ ಹೇಳಿದರು.
ಡೇಟಾ ಕೇಂದ್ರಗಳು ಹಾಗೂ ಕೇಬಲ್ ಲ್ಯಾಂಡಿಂಗ್ ಸ್ಟೇಷನ್
ಕರ್ನಾಟಕದ ಸುಸ್ಥಿರ ಡೇಟಾ ಕೇಂದ್ರ ನೀತಿ ಹಾಗೂ ಡೇಟಾ ಕೇಂದ್ರಗಳು, ಕ್ಲೌಡ್ ಸೇವೆಗಳು ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಹಯೋಗದ ಅವಕಾಶಗಳ ಕುರಿತು ಚರ್ಚೆ ನಡೆಯಿತು. ಉದ್ದೇಶಿತ ಮಂಗಳೂರು ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಸೇರಿದಂತೆ ಡಿಜಿಟಲ್ ಮೂಲಸೌಕರ್ಯ ಬಲಪಡಿಸುವ ರಾಜ್ಯದ ಯೋಜನೆಗಳು ಹಾಗೂ ಅದರಲ್ಲಿ ಸಂಸ್ಥೆಯ ಪರಿಣತಿಯ ಬಳಕೆಯ ಬಗ್ಗೆಯೂ ಸಚಿವರು ಪ್ರಸ್ತಾಪಿಸಿದರು.
ಕ್ಲೌಡ್ ಸೇವೆಗಳಾಚೆಗೆ
ಕ್ಲೌಡ್ ಸೇವೆಗಳಾಚೆಗೆ ಜೈವಿಕ ತಂತ್ರಜ್ಞಾನ, ಆರೋಗ್ಯ, ಜೀವ ವಿಜ್ಞಾನ ಮತ್ತು ವಾಹನ ಉತ್ಪಾದನಾ ಕ್ಷೇತ್ರಗಳಲ್ಲಿಯೂ ವಿಸ್ತರಿಸುವಂತೆ ಖರ್ಗೆ ಸಂಸ್ಥೆಗೆ ಸಲಹೆ ನೀಡಿದರು.
ರಾಜ್ಯದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಗೆ ಬೆಂಬಲ ನೀಡಲು ಪಾಲುದಾರರಾಗುವಂತೆ ಆಹ್ವಾನಿಸಿದ ಅವರು, ಸ್ಟಾರ್ಟ್ಅಪ್ಗಳು ಸರ್ಕಾರಿ ಇಲಾಖೆಗಳೊಂದಿಗೆ ತಮ್ಮ ಪರಿಹಾರಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಅವಕಾಶ ನೀಡುವ, ಇತ್ತೀಚೆಗೆ ಆರಂಭವಾದ ‘ಗವರ್ನ್ಮೆಂಟ್ ಫಸ್ಟ್’ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಎನ್ಟಿಟಿ ಡೇಟಾದ ಕ್ಲೌಡ್, ಎಐ ಹಾಗೂ ಭದ್ರತಾ ವಿಭಾಗದ ಅಧ್ಯಕ್ಷ ಮತ್ತು ಜಾಗತಿಕ ಮುಖ್ಯಸ್ಥ ಚಾರ್ಲಿ ಲಿ, ಗೂಗಲ್ ಬಿಸಿನೆಸ್ ಯೂನಿಟ್ನ ಜಾಗತಿಕ ವ್ಯವಸ್ಥಾಪಕ ನಿರ್ದೇಶಕ ಹಾಗೂ ಉಪಾಧ್ಯಕ್ಷ ಅಯ್ಮಾನ್ ಹುಸೇನ್, ಮುಖ್ಯ ಬೆಳವಣಿಗೆ ಅಧಿಕಾರಿ ಶಶಿರ್ ಶೆಟ್ಟಿ, ಜೊತೆಗೆ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಹಾಗೂ ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಭಾಗವಹಿಸಿದ್ದರು.
