ಎನ್ಯುಮರೇಶನ್ ಅರ್ಜಿ ಭರ್ತಿ ಮಾಡಿ ಎಸ್ಐಆರ್ ಪ್ರಕ್ರಿಯೆಗೆ ಚಾಲನೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್; ಮತದಾನದ ಹಕ್ಕು ಉಳಿಸಿಕೊಳ್ಳುವಂತೆ ಕರೆ
ಬೆಂಗಳೂರು, ಜೂನ್ 30: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ತಮ್ಮ ಎನ್ಯುಮರೇಶನ್ ಅರ್ಜಿ (ಗಣತಿ ನಮೂನೆ) ಭರ್ತಿ ಮಾಡಿ ಸಲ್ಲಿಸುವ ಮೂಲಕ ರಾಜ್ಯದಲ್ಲಿ ಆರಂಭಗೊಂಡಿರುವ ವಿಶೇಷ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಚಾಲನೆ ನೀಡಿ, ರಾಜ್ಯದ ಪ್ರತಿಯೊಬ್ಬ ಅರ್ಹ ಮತದಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳುವಂತೆ ಕರೆ ನೀಡಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಹಾಗೂ ಚುನಾವಣಾ ಅಧಿಕಾರಿಗಳ ಸಮ್ಮುಖದಲ್ಲಿ ಗಣತಿ ನಮೂನೆ ಭರ್ತಿ ಮಾಡಿದರು. ಇದೇ ವೇಳೆ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿ ಅವರಿಗೆ ಎನ್ಯುಮರೇಶನ್ ಅರ್ಜಿಯನ್ನು ನೀಡಿ ರಾಜ್ಯವ್ಯಾಪಿ ಅಭಿಯಾನಕ್ಕೆ ಸಾಂಕೇತಿಕ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ತಮ್ಮ ಮನೆಯಿಂದಲೇ ಈ ಅಭಿಯಾನ ಆರಂಭಿಸಿರುವುದಾಗಿ ತಿಳಿಸಿದರು.
ಮತದಾರರು ಈ ಹಿಂದೆ ಮತದಾರರ ಪಟ್ಟಿಯಲ್ಲಿ ದಾಖಲಿಸಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಮೊಬೈಲ್ ಸಂಖ್ಯೆ ಬದಲಾಗಿದ್ದರೆ ಅದನ್ನು ಬೂತ್ ಮಟ್ಟದ ಅಧಿಕಾರಿಗಳ (BLO) ಮೂಲಕ ಪರಿಷ್ಕರಿಸಿಕೊಳ್ಳಲು ಅವಕಾಶವಿದ್ದು, ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ (OTP) ಕಳುಹಿಸಿ ದೃಢೀಕರಣ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ವಿವರಿಸಿದರು.
ಹೆಸರು, ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರ ತಿದ್ದುಪಡಿಗೂ ಅವಕಾಶ
ಮತದಾರರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಕುಟುಂಬದ ಸದಸ್ಯರ ಪರವಾಗಿ ಒಬ್ಬ ವ್ಯಕ್ತಿಯೇ ಎಲ್ಲಾ ಸದಸ್ಯರ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಕುಟುಂಬದ ಪರವಾಗಿ ಒಬ್ಬರ ಸಹಿ ಇದ್ದರೂ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಹೇಳಿದರು.
ಭಾವಚಿತ್ರ ಬದಲಾಯಿಸಲು ಬಯಸುವವರು ಹೊಸ ಪಾಸ್ಪೋರ್ಟ್ ಗಾತ್ರದ ಭಾವಚಿತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬಹುದು. ಹೊಸ ಮತದಾರರು ನಿವಾಸ ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ ಎಂದರು.
ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ
ಮೊಬೈಲ್ ಆ್ಯಪ್ ಬಳಕೆಯ ಕುರಿತು ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ತಮಗೂ ಆ್ಯಪ್ ಬಳಕೆಯಲ್ಲಿ ಸಹಾಯ ಬೇಕಾಯಿತು ಎಂದು ಹೇಳಿ, ಡಿಜಿಟಲ್ ವ್ಯವಸ್ಥೆ ಬಳಸಲು ಸಾಧ್ಯವಾಗದವರು ಬಿಎಲ್ಓಗಳಿಂದ ಅರ್ಜಿ ಪಡೆದು ಆಫ್ಲೈನ್ನಲ್ಲಿಯೇ ಭರ್ತಿ ಮಾಡಿ ಸಲ್ಲಿಸಬಹುದು ಎಂದು ತಿಳಿಸಿದರು.
ಮತದಾನದ ಹಕ್ಕು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ
ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಪ್ರಜಾಪ್ರಭುತ್ವದ ಹಕ್ಕಾಗಿದ್ದು, ಅದನ್ನು ಉಳಿಸಿಕೊಳ್ಳಲು ಎಲ್ಲರೂ ಎನ್ಯುಮರೇಶನ್ ಅರ್ಜಿ ಭರ್ತಿ ಮಾಡಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
ರಾಜ್ಯ ಸರ್ಕಾರ ಈಗಾಗಲೇ ಅಗತ್ಯ ಪ್ರಮಾಣಪತ್ರಗಳನ್ನು ಜನರಿಗೆ ಒದಗಿಸುವ ವ್ಯವಸ್ಥೆ ಮಾಡಿಕೊಂಡಿದ್ದು, ಮತದಾರರು ಯಾವುದೇ ನಿರ್ಲಕ್ಷ್ಯ ವಹಿಸದೆ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ರಾಜ್ಯದ ಯೋಜನೆಗಳು ರಾಜ್ಯದ ಜನರಿಗೇ ತಲುಪಬೇಕು
ಕೆಲವು ರಾಜ್ಯಗಳಲ್ಲಿ ಮತದಾರರಾಗಿರುವವರಿಗೆ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಉಲ್ಲೇಖಿಸಿದ ಮುಖ್ಯಮಂತ್ರಿ, ಮುಂದಿನ ದಿನಗಳಲ್ಲಿ ಇಂತಹ ವ್ಯವಸ್ಥೆಗಳು ಇನ್ನಷ್ಟು ವಿಸ್ತಾರವಾಗುವ ಸಾಧ್ಯತೆ ಇದೆ ಎಂದು ಹೇಳಿದರು.
“ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಕರ್ನಾಟಕದ ಜನರಿಗಾಗಿ ರೂಪಿಸಲಾಗಿದೆ. ಬೇರೆ ರಾಜ್ಯದ ಮತದಾರರಿಗೆ ನಾವು ಏಕೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ನೀಡಬೇಕು? ನಮ್ಮ ರಾಜ್ಯದ ಜನರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ತಲುಪಬೇಕು ಎಂಬುದೇ ನಮ್ಮ ಉದ್ದೇಶ,” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯಾದ್ಯಂತ ಜೂನ್ 30ರಿಂದ ಆರಂಭವಾಗಿರುವ ವಿಶೇಷ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (SIR) ಅಭಿಯಾನದ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಎನ್ಯುಮರೇಶನ್ ಅರ್ಜಿಗಳನ್ನು ವಿತರಿಸಿ, ಸಂಗ್ರಹಿಸುವ ಕಾರ್ಯವನ್ನು ಆರಂಭಿಸಿದ್ದಾರೆ.