ಬೆಂಗಳೂರು: ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಹಾಗೂ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಒಟ್ಟು ₹40 ಕೋಟಿ ಅಂದಾಜು ವೆಚ್ಚದಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸಾ ಉಪಕರಣ ಖರೀದಿಗೆ ಗುರುವಾರ (ನವೆಂಬರ್ 5) ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಂಪುಟ ನಿರ್ಣಯಗಳ ಟಿಪ್ಪಣಿ ತಿಳಿಸಿದೆ.
ಪ್ರತಿ ಸಂಸ್ಥೆಗೆ ತಲಾ ₹20 ಕೋಟಿ ವೆಚ್ಚದಲ್ಲಿ ಉಪಕರಣ ಖರೀದಿಸಲಾಗುವುದು. ಇದರಲ್ಲಿ ₹5 ಕೋಟಿಯನ್ನು ಆಯಾ ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಮತ್ತು ₹15 ಕೋಟಿಯನ್ನು ಸರ್ಕಾರದ ಅನುದಾನದ ಮೂಲಕ ಭರಿಸಲಾಗುತ್ತದೆ ಎಂದು ಟಿಪ್ಪಣಿ ತಿಳಿಸಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಂದ ಕಿದ್ವಾಯಿ ಸಂಸ್ಥೆಗೆ ಕ್ಯಾನ್ಸರ್ ರೋಗಿಗಳು ಬರುತ್ತಾರೆ. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯವು 2,404 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಹೊಂದಿದ್ದು ಉತ್ತರ ಕರ್ನಾಟಕದ ರೋಗಿಗಳಿಗೆ ಸೇವೆ ನೀಡುತ್ತದೆ. ಆರು ತಿಂಗಳೊಳಗೆ ಖರೀದಿ ಅನುಷ್ಠಾನಗೊಳಿಸುವ ಗುರಿ ಇದೆ ಎಂದು ಟಿಪ್ಪಣಿ ತಿಳಿಸಿದೆ.
