ಬೆಂಗಳೂರಿನ ಬಿಐಇಸಿಯಲ್ಲಿ ಬುಧವಾರ ನಡೆದ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಬೆಂಗಳೂರು ಇನ್ನೋವೇಶನ್ ವರದಿ 2026ರ ಪ್ರತಿಗಳೊಂದಿಗೆ ಗಣ್ಯರು. ಚಿತ್ರ: ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ
ಬೆಂಗಳೂರು: ಇಂದು ಅತಿವೇಗದ ಅಂತರ್ಜಾಲ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ನೆರವಿನಿಂದ ಚಿಕ್ಕ ಪಟ್ಟಣಗಳೂ ಸ್ಟಾರ್ಟ್‌ಅಪ್ ಆಕರ್ಷಕ ಕೇಂದ್ರಗಳಾಗಲು ಸಾಧ್ಯವಿದೆ; ಆದರೆ ಸಂಪರ್ಕ, ವಿದ್ಯುತ್‌ನಂತಹ ಮೂಲಸೌಕರ್ಯಗಳ ಲಭ್ಯತೆ ಅತ್ಯಗತ್ಯ ಎಂದು ಭಾರತೀಯ ಸಾಫ್ಟ್‌ವೇರ್ ತಂತ್ರಜ್ಞಾನ ಪಾರ್ಕ್ (ಎಸ್‌ಟಿಪಿಐ) ಕೇಂದ್ರ ಕಚೇರಿಯ ನಿರ್ದೇಶಕ ರಾಕೇಶ್ ದುಬೆ ಹೇಳಿದ್ದಾರೆ.
ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಬುಧವಾರ ನಡೆದ ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮಹಾನಗರಗಳ ಆಚೆಗೂ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗಲಿವೆ ಎಂದರು.
ಇನ್ನು ಮುಂದಿನ ಐದು ವರ್ಷಗಳಲ್ಲಿ ಸ್ಟಾರ್ಟ್‌ಅಪ್ ವಲಯದಲ್ಲಿ ಮಹತ್ತರ ಪರಿವರ್ತನೆಯಾಗಲಿದ್ದು, ಭಾರತಕ್ಕೆ, ಅದರಲ್ಲೂ 2ನೇ ಮತ್ತು 3ನೇ ಹಂತದ ನಗರಗಳಿಗೆ ಹೆಚ್ಚಿನ ಅವಕಾಶಗಳಿವೆ. ತಂತ್ರಜ್ಞಾನ ಉದ್ಯಮಗಳು 1ನೇ ಹಂತದ ಅಥವಾ 2, 3ನೇ ಹಂತದ ನಗರಗಳ ನಡುವೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಎಂದು ವಿವರಿಸಿದರು.
ಇಂದು ಎಲ್ಲ ವಲಯಗಳಲ್ಲೂ ನವೀನ ಚಿಂತನೆಯ ಸ್ಟಾರ್ಟ್‌ಅಪ್‌ಗಳು ಹೊರಹೊಮ್ಮುತ್ತಿವೆ ಎಂದ ದುಬೆ, ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗೆ ಬೆಂಬಲ ನೀಡಲು ಎಸ್‌ಟಿಪಿಐ ದೇಶಾದ್ಯಂತ 73 ಕೇಂದ್ರಗಳನ್ನು ಹೊಂದಿದೆ ಎಂದರು. ಕಳೆದ ಕೆಲವು ದಶಕಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕಂಡ ಪರಿವರ್ತನೆ ಮುಂದಿನ ಕೆಲವೇ ವರ್ಷಗಳಲ್ಲಿ ಸ್ಟಾರ್ಟ್‌ಅಪ್ ವಲಯದಲ್ಲೂ ಆಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಎಸ್‌ಟಿಪಿಐ ಬೆಂಗಳೂರು ನಿರ್ದೇಶಕ ವಿ. ಮಹದೇಶ್ ಮಾತನಾಡಿ, ಸಂಸ್ಥೆ ಸ್ಟಾರ್ಟ್‌ಅಪ್‌ಗಳಿಗೆ ಇನ್‌ಕ್ಯುಬೇಷನ್ ಬೆಂಬಲ ನೀಡುತ್ತಿದೆ; ಭೌತಿಕ ಕಾರ್ಯಸ್ಥಳದ ಜೊತೆಗೆ ಕ್ಲೌಡ್ ಮೂಲಸೌಕರ್ಯ ಮತ್ತು ಅತಿವೇಗದ ಅಂತರ್ಜಾಲ ಸಂಪರ್ಕವನ್ನೂ ಒದಗಿಸುತ್ತದೆ ಎಂದರು. ಸ್ಟಾರ್ಟ್‌ಅಪ್‌ಗಳಿಗೆ ಹೆಚ್ಚುವರಿ ಬೆಂಬಲ ಮತ್ತು ಸೌಲಭ್ಯಗಳ ವಿಷಯದಲ್ಲಿ ಉದ್ಯಮ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ; ಅದೇ ವೇಳೆ ರಫ್ತು ಹೆಚ್ಚಿಸುವಲ್ಲಿ ಉದ್ಯಮ ಗಣನೀಯ ಕೊಡುಗೆ ನೀಡಬೇಕೆಂದು ಸರ್ಕಾರವೂ ನಿರೀಕ್ಷಿಸುತ್ತದೆ ಎಂದು ಅವರು ಹೇಳಿದರು.
ಚರ್ಚೆಯನ್ನು ನಿರ್ವಹಿಸಿದ ಜನ್‌ಎಐ (JanAI) ಸಂಸ್ಥಾಪಕ ಮದನ್ ಪಡಕಿ, 2047ರ ವೇಳೆಗೆ ವಿಕಸಿತ ಭಾರತ ಗುರಿ ಸಾಧನೆಯಲ್ಲಿ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆ ಮಹತ್ವದ ಪಾತ್ರ ವಹಿಸಲಿದೆ ಎಂದರು. ಸ್ಟಾರ್ಟ್‌ಅಪ್‌ಗಳು ಸಮಕಾಲೀನ ಜಾಗತಿಕ, ಸಾಮಾಜಿಕ ಮತ್ತು ಜೀವನಶೈಲಿ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ರೂಪಿಸಬಹುದು; ಪ್ರತಿಯೊಂದು ಸಮಸ್ಯೆ ಅಥವಾ ಸವಾಲು ಉದ್ಯಮಿಗಳಿಗೆ ಒಂದು ಅವಕಾಶವೂ ಹೌದು ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಐಟಿ ಮತ್ತು ಬಿಟಿ ಇಲಾಖೆ ಇದೇ ಸಮಿಟ್‌ನಲ್ಲಿ ಗವರ್ನಮೆಂಟ್ ಫಸ್ಟ್ ಉಪಕ್ರಮದಡಿ ಎಂಟು ಸ್ಟಾರ್ಟ್‌ಅಪ್‌ಗಳನ್ನು ಆಯ್ಕೆ ಮಾಡಿದೆ.
