ಬೆಂಗಳೂರಿನ ಬಿಐಇಸಿಯಲ್ಲಿ ನಡೆದ ಬೆಂಗಳೂರು ಟೆಕ್ ಸಮಿಟ್ನಲ್ಲಿ ವೇದಿಕೆಯ ಮೇಲೆ ದಾಖಲೆಯೊಂದನ್ನು ಸ್ವೀಕರಿಸುತ್ತಿರುವ ಭಾಗವಹಿಸಿದವರು. ಚಿತ್ರ: ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ
ಬೆಂಗಳೂರು: ಆಧುನಿಕ ಯುದ್ಧತಂತ್ರದ ಸ್ವರೂಪ ಮುಂಬರುವ ದಶಕಗಳಲ್ಲಿ ಸಂಪೂರ್ಣ ಬದಲಾಗಲಿದ್ದು, ಸಾಂಪ್ರದಾಯಿಕ ಯುದ್ಧನೌಕೆಗಳು, ರಾಡಾರ್ಗಳು ಮತ್ತು ಸೈನಿಕರ ಬದಲಿಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಡಿಆರ್ಡಿಒ ಇಸಿಎಸ್ ವಿಭಾಗದ ಮಹಾನಿರ್ದೇಶಕ ಡಾ. ಬಿ.ಕೆ. ದಾಸ್ ಹೇಳಿದರು.
ಬೆಂಗಳೂರು ಟೆಕ್ ಸಮಿಟ್ನಲ್ಲಿ ಬುಧವಾರ ‘ಭವಿಷ್ಯದಲ್ಲಿ ಯುದ್ಧಗಳು’ ಕುರಿತು ಮಾತನಾಡಿದ ಅವರು, ಡ್ರೋನ್ಗಳು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಸುಧಾರಿತ ತಂತ್ರಾಂಶಗಳು ಭವಿಷ್ಯದ ಯುದ್ಧತಂತ್ರದ ಪ್ರಮುಖ ಸಾಧನಗಳಾಗಲಿವೆ ಎಂದರು. ರಕ್ಷಣಾ ವಲಯದ ಪ್ರತಿಯೊಂದು ಸವಾಲೂ ಕ್ರಮೇಣ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಯಾಗಿ ರೂಪಾಂತರಗೊಳ್ಳಲಿದ್ದು, ಹೀಗಾಗಿ ಸೆಮಿಕಂಡಕ್ಟರ್ಗಳು ಭವಿಷ್ಯದ ರಕ್ಷಣಾ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿವೆ ಎಂದು ತಿಳಿಸಿದರು.
ತಂತ್ರಜ್ಞಾನ ಆಧಾರಿತ ಯುದ್ಧತಂತ್ರದಲ್ಲಿ ಪ್ರಮುಖವಾಗಿ ಐದು ಹಂತಗಳಿರುತ್ತವೆ. ರಾಡಾರ್ಗಳು, ಉಪಗ್ರಹಗಳು ಮತ್ತು ಕ್ಯಾಮೆರಾಗಳ ಮೂಲಕ ಮಾಹಿತಿ ಸಂಗ್ರಹಿಸುವ ಸೆನ್ಸರ್ಗಳು ಮೊದಲ ಹಂತವಾಗಿರುತ್ತವೆ. ಕ್ಲೌಡ್ ಕಂಪ್ಯೂಟಿಂಗ್ ಮೂಲಕ ದತ್ತಾಂಶ ಸಂಗ್ರಹ ಮತ್ತು ಸಂಸ್ಕರಣೆ, ಎಐ ತಂತ್ರಜ್ಞಾನದ ಮೂಲಕ ಮಾಹಿತಿ ವಿಶ್ಲೇಷಿಸಿ ಅಗತ್ಯ ಗುಪ್ತಚರ ಮಾಹಿತಿ ಪಡೆಯುವುದು, ಮಾನವರು ಮತ್ತು ಯಂತ್ರಗಳು ಸಮನ್ವಯದಿಂದ ನಿರ್ಧಾರ ಕೈಗೊಳ್ಳುವುದು ನಂತರದ ಹಂತಗಳಾಗಿರುತ್ತವೆ ಎಂದು ವಿವರಿಸಿದರು.
ರಕ್ಷಣಾ ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ಸೆಮಿಕಂಡಕ್ಟರ್ಗಳು, ರೇಡಿಯೊ ಫ್ರೀಕ್ವೆನ್ಸಿ (ಆರ್ಎಫ್) ಮತ್ತು ಮೈಕ್ರೋವೇವ್ ತಂತ್ರಜ್ಞಾನ, ಸುಧಾರಿತ ಸೆನ್ಸರ್ಗಳು, ಸುರಕ್ಷಿತ ಸಂವಹನ ಸಂಪರ್ಕ ವ್ಯವಸ್ಥೆ (ಸೆಕ್ಯೂರ್ಡ್ ಕನೆಕ್ಟಿವಿಟಿ) ಹಾಗೂ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಆಧರಿಸಿರುತ್ತದೆ ಎಂದ ದಾಸ್, ಈಗ ನಡೆಯುತ್ತಿರುವ ಇರಾನ್ ಯುದ್ಧವು ಎಐ ಆಧಾರಿತ ಯುದ್ಧತಂತ್ರಕ್ಕೆ ಪ್ರಮುಖ ಉದಾಹರಣೆಯಾಗಿದೆ ಎಂದು ಉಲ್ಲೇಖಿಸಿದರು.
ಮುಂಬರುವ ಹತ್ತು ವರ್ಷಗಳಲ್ಲಿ ಭಾರತವು ಈ ಕ್ಷೇತ್ರಗಳಲ್ಲಿ ತನ್ನ ಸ್ವದೇಶಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದ ಅವರು, ಸ್ವದೇಶಿ ಸೆನ್ಸಿಂಗ್ ವಿನ್ಯಾಸ, ಕಾಂಪೌಂಡ್ ಸೆಮಿಕಂಡಕ್ಟರ್ಗಳ ಅಭಿವೃದ್ಧಿ, ರಕ್ಷಣಾ ಕ್ಷೇತ್ರಕ್ಕೆ ಪೂರಕವಾದ ಎಡ್ಜ್ ಎಐ ತಂತ್ರಜ್ಞಾನ, ಸುಧಾರಿತ ಸೆನ್ಸರ್ಗಳ ತಯಾರಿಕೆ ಹಾಗೂ ರಾಷ್ಟ್ರೀಯ ಆವಿಷ್ಕಾರ ಪರಿಸರ ವ್ಯವಸ್ಥೆಯ ಬಲವರ್ಧನೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಇದೇ ಸಮಿಟ್ನಲ್ಲಿ ಮೋಹನ್ದಾಸ್ ಪೈ, ಭವಿಷ್ಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಎಐ ಟೀಚರ್ ಇರಲಿದ್ದಾರೆ ಎಂದಿದ್ದಾರೆ.
