2028ರ ವೇಳೆಗೆ ಡ್ರಗ್ ಮುಕ್ತ ಕರ್ನಾಟಕ ಗುರಿ: ₹89 ಕೋಟಿ ಮೌಲ್ಯದ ಮಾದಕ ವಸ್ತುಗಳ ನಾಶ; ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ ಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು, ಜೂನ್ 30: 2028ರ ವೇಳೆಗೆ ಡ್ರಗ್ ಮುಕ್ತ–ನಶೆ ಮುಕ್ತ ಕರ್ನಾಟಕ ನಿರ್ಮಿಸುವುದು ರಾಜ್ಯ ಸರ್ಕಾರದ ಗುರಿಯಾಗಿದ್ದು, ವಿದ್ಯಾರ್ಥಿಗಳು, ಯುವಜನತೆ, ಪೋಷಕರು ಹಾಗೂ ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಿದರೆ ರಾಜ್ಯದಿಂದ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಡ್ರಗ್ಸ್ ವಿರುದ್ಧದ ಹೋರಾಟವನ್ನು ಜನಾಂದೋಲನವಾಗಿ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
“ನಶೆ ಬಿಡಿ, ಖುಷಿ ಪಡಿ ಎಂಬುದು ನಮ್ಮ ಸಂದೇಶ. ನಾವು ಇಂದು ಮಾಡಿರುವ ಸಂಕಲ್ಪ ಜೀವನಪರ್ಯಂತ ನಮ್ಮ ಬದುಕಿನ ಭಾಗವಾಗಬೇಕು. ವಿದ್ಯಾರ್ಥಿಗಳು ಮತ್ತು ಯುವಜನತೆ ಯಾವುದೇ ಒತ್ತಡಕ್ಕೂ ಮಣಿಯದೆ ತಮ್ಮ ದೇಹ ಹಾಗೂ ಮನಸ್ಸಿನ ಮೇಲೆ ನಿಯಂತ್ರಣ ಹೊಂದಿರಬೇಕು,” ಎಂದು ಅವರು ಹೇಳಿದರು.
₹89 ಕೋಟಿ ಮೌಲ್ಯದ ಮಾದಕ ವಸ್ತುಗಳ ನಾಶ
ಕಳೆದ ಮೂರು ವರ್ಷಗಳಲ್ಲಿ ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ₹89 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿ ಧ್ವಂಸಗೊಳಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ತನಿಖಾ ತಂಡಗಳು, ಕಾನ್ಸ್ಟೇಬಲ್ಗಳು ಹಾಗೂ ಎಲ್ಲಾ ಸಿಬ್ಬಂದಿಯನ್ನು ಅಭಿನಂದಿಸಿದ ಅವರು, ರಾಜ್ಯದಲ್ಲಿ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು.
ಮಕ್ಕಳ ವ್ಯಸನವನ್ನು ಮುಚ್ಚಿಡಬೇಡಿ
ಸಾಮಾಜಿಕ ಗೌರವಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಮಕ್ಕಳ ವ್ಯಸನವನ್ನು ಪೋಷಕರು ಮುಚ್ಚಿಡಬಾರದು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
“ಮಕ್ಕಳ ವ್ಯಸನವನ್ನು ಮುಚ್ಚಿಟ್ಟಷ್ಟೂ ಅವರ ಭವಿಷ್ಯ ಹಾಳಾಗುತ್ತದೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಡ್ರಗ್ಸ್ ಸರಬರಾಜು ಜಾಲವನ್ನು ಪತ್ತೆಹಚ್ಚಲು ನೆರವಾಗಬೇಕು. ಮಾಹಿತಿ ನೀಡುವ ಮಕ್ಕಳ ಅಥವಾ ಕುಟುಂಬಗಳ ಹೆಸರು ಬಹಿರಂಗವಾಗದಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡುತ್ತೇನೆ,” ಎಂದು ಹೇಳಿದರು.
ಮಾಹಿತಿ ನೀಡಿದವರಿಗೆ ಬಹುಮಾನ
ಮಾದಕ ವಸ್ತುಗಳ ಸೇವನೆ ಅಥವಾ ಸರಬರಾಜು ಕುರಿತು ಸಾರ್ವಜನಿಕರು, ಪೋಷಕರು ಹಾಗೂ ನಾಗರಿಕರು ಗುಪ್ತ ಮಾಹಿತಿ ನೀಡಿದರೆ ಪೊಲೀಸ್ ಇಲಾಖೆಯಿಂದ ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಈ ಕ್ರಮದಿಂದ ಡ್ರಗ್ಸ್ ಸರಬರಾಜು ಜಾಲವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹತ್ತಿಕ್ಕಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಪಾನ್ ಮಸಾಲಾ ಹಾಗೂ ಗುಟ್ಕಾ ಕುರಿತು ಎಚ್ಚರಿಕೆ
ಪಾನ್ ಮಸಾಲಾ ಹಾಗೂ ಗುಟ್ಕಾದಲ್ಲಿ ಅಮಲು ಪದಾರ್ಥಗಳನ್ನು ಬೆರೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಮೊಬೈಲ್ ಮೂಲಕ ಮನೆಗಳಿಗೆ ಮಾದಕ ವಸ್ತುಗಳನ್ನು ತಲುಪಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದರು.
“ಪಾನ್ ಮಸಾಲಾ ಅಥವಾ ಗುಟ್ಕಾದಲ್ಲಿ ಅಮಲು ಪದಾರ್ಥ ಬೆರೆಸಿರುವುದು ಪತ್ತೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಬ ಸಂದೇಶವನ್ನು ಈಗಾಗಲೇ ನೀಡಿದ್ದೇನೆ,” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಸಾರ್ವಜನಿಕರ ಸಹಕಾರ ಅಗತ್ಯ
ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ಪ್ರಕಾರ ಭಾರತದಲ್ಲಿ ಪ್ರತಿವರ್ಷ 13ರಿಂದ 14 ಲಕ್ಷ ಜನರು ತಂಬಾಕು ಸೇವನೆಯಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಉಲ್ಲೇಖಿಸಿದ ಮುಖ್ಯಮಂತ್ರಿ, ಸಮಾಜದಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದರು.
ಶಾಲಾ-ಕಾಲೇಜುಗಳಲ್ಲಿ ಈಗಾಗಲೇ ಸ್ಟುಡೆಂಟ್ ಪೊಲೀಸ್ ವ್ಯವಸ್ಥೆ ಜಾರಿಯಲ್ಲಿದ್ದು, ಡ್ರಗ್ಸ್ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳ ಜವಾಬ್ದಾರಿ
ಡ್ರಗ್ಸ್ ವ್ಯಸನಕ್ಕೆ ಒಳಗಾದ ಸ್ನೇಹಿತರನ್ನು ಸರಿದಾರಿಗೆ ತರುವ ಜವಾಬ್ದಾರಿಯೂ ವಿದ್ಯಾರ್ಥಿಗಳ ಮೇಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
“ನೀವು ಕೇವಲ ವಿದ್ಯಾರ್ಥಿಗಳಲ್ಲ, ದೇಶದ ಜವಾಬ್ದಾರಿಯುತ ನಾಗರಿಕರು. ಇಡೀ ವಿಶ್ವ ಬೆಂಗಳೂರನ್ನು ಗಮನಿಸುತ್ತಿದೆ. ಪ್ರತಿವರ್ಷ ಕರ್ನಾಟಕದಿಂದ ಸುಮಾರು 19,940 ವೈದ್ಯರು ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಶುಶ್ರೂಷಕರು ಹೊರಬರುತ್ತಿದ್ದಾರೆ. ಅತ್ಯುತ್ತಮ ಮಾನವ ಸಂಪನ್ಮೂಲ ಹೊಂದಿರುವ ರಾಜ್ಯ ಕರ್ನಾಟಕ,” ಎಂದು ಹೇಳಿದರು.
ಪೊಲೀಸ್ ವ್ಯವಸ್ಥೆಯ ಮೇಲೆ ವಿಶ್ವಾಸ ಇರಲಿ
ಪೊಲೀಸ್ ಇಲಾಖೆ ಸಮಾಜದ ಹಾಗೂ ಕುಟುಂಬಗಳ ರಕ್ಷಣೆಗೆ ಶ್ರಮಿಸುತ್ತಿದ್ದು, ಪ್ರತಿಯೊಬ್ಬ ನಾಗರಿಕರೂ ಪೊಲೀಸ್ ವ್ಯವಸ್ಥೆಯ ಮೇಲೆ ವಿಶ್ವಾಸ ಇಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.
“ಡ್ರಗ್ ಮುಕ್ತ ಕರ್ನಾಟಕ ಎನ್ನುವುದು ಕೇವಲ ಸರ್ಕಾರದ ಘೋಷಣೆಯಲ್ಲ. ಇದು ಪ್ರತಿಯೊಬ್ಬ ಕನ್ನಡಿಗನ ಸಂಕಲ್ಪವಾಗಬೇಕು. ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಪೊಲೀಸ್ ಇಲಾಖೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ 2028ರೊಳಗೆ ನಶೆ ಮುಕ್ತ ಕರ್ನಾಟಕ ನಿರ್ಮಾಣ ಸಾಧ್ಯ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.