ಬೆಂಗಳೂರು:
ಪ್ರತಿಪಕ್ಷದ ವಿರೋಧದ ನಡುವೆ ವಿಧಾನಪರಿಷತ್ ನಲ್ಲಿ ಚಾಣಕ್ಯ ವಿವಿ ಮಸೂದೆ 2021 ಅಂಗೀಕಾರಗೊಂಡಿದೆ.
ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಚಾಣಕ್ಯ ವಿವಿ ವಿಧೇಯಕ 2021ನ್ನು ಪರ್ಯಾಲೋಚನೆಗಾಗಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಮಂಡಿಸಿದರು. ಪ್ರತಿಪಕ್ಷಗಳು ಸಭಾತ್ಯಾಗ ಮಾಡುತ್ತಿದ್ದಂತೆಯೇ ಪ್ರಸ್ತಾವವನ್ನು ಅಂಗೀಕರಿಸಲಾಯಿತು.
ಇದಕ್ಕೂ ಮುನ್ನ ಚರ್ಚೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಸರ್ಕಾರದ ಸುಪರ್ದಿಯಲ್ಲಿರುವ ಸಾಕಷ್ಟು ವಿವಿಗಳನ್ನು ಶಕ್ತಿಶಾಲಿಯನ್ನಾಗಿ ಮಾಡುವ ಬದಲು ಖಾಸಗಿ ವಿವಿಯೊಂದಕ್ಕೆ ಭೂಮಿ ನೀಡಿರುವುದೇಕೆ. ತರಾತುರಿಯಲ್ಲಿ ಮಂಡಿಸುತ್ತಿರುವ ವಿಧೇಯಕ್ಕೆ ವಿರೋಧವಿದೆ ಎಂದು ಪಕ್ಷದ ಇತರ ಸದಸ್ಯರೊಡನೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದರು.
ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ, ರೈತರಿಂದ ಪಡೆದ ಭೂಮಿಯನ್ನು ಯಾವ ಉದ್ದೇಶಕ್ಕೆ ಪಡೆಯಲಾಯಿತೋ ಅದಕ್ಕೆ ಬಳಸಿಕೊಳ್ಳಬೇಕು. ಇಲ್ಲವಾದರೆ ಹಿಂದಿರುಗಿಸಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರ್ ಅಶೋಕ, ಈ ಹಿಂದೆ ಕಾಂಗ್ರೆಸ್ ಸರ್ಕಾರವು ನಾಗರಬಾವಿಯಲ್ಲಿ ಅಡಿಗೆ 20 ಸಾವಿರದಂತೆ ಆಸ್ಪತ್ರೆಯೊಂದಕ್ಕೆ 50 ಕೋಟಿ ರೂಪಾಯಿಗೆ ಭೂಮಿ ನೀಡಿಲ್ಲವೇ ಎಂದು ಪ್ರಶ್ನಿಸಿದರು.