ಬೆಂಗಳೂರು:
ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ವೃದ್ಧಿಯ ನಿಟ್ಟಿನಲ್ಲಿ ತಮ್ಮ ‘ಬೆಸ್ಟ್’ ಅಭಿಯಾನದಡಿ 1.2 ಲಕ್ಷಕ್ಕೂ ಅಧಿಕ ಸಂಜೀವಿನಿ ಗೈಡ್ ಗಳು, ವರ್ಕ್ ಬುಕ್ (ಅಭ್ಯಾಸ ಪುಸ್ತಕ)ಗಳನ್ನು ವಿತರಿಸುವುದಾಗಿ ಬೆಂಗಳೂರು ದಕ್ಷಿಣ ಸಂಸದ ಶ್ರೀ ತೇಜಸ್ವೀ ಸೂರ್ಯ ಘೋಷಿಸಿದ್ದಾರೆ.
ದಯಾನಂದ್ ಸಾಗರ್ ಆಡಿಟೋರಿಯಮ್ ನಲ್ಲಿ 2021ನೇ ಸಾಲಿನ ‘ಬೆಸ್ಟ್’ ಯೋಜನೆಗೆ ಚಾಲನೆ ನೀಡುತ್ತ ಮಾತನಾಡಿದ ಸಂಸದರು, ಈ ಅಭಿಯಾನವು ‘ಬೆಸ್ಟ್’ ಯೋಜನೆಯ ಭಾಗವಾಗಿದ್ದು, ಬೆಂಗಳೂರು ದಕ್ಷಿಣದ ಸರ್ಕಾರಿ ಶಾಲೆಗಳ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು 60,000 ಗೈಡ್ ಬುಕ್ ಗಳು, 60,000ಕ್ಕೂ ಅಧಿಕ ವರ್ಕ್ ಬುಕ್ ಗಳನ್ನು ಪಡೆಯಲಿದ್ದಾರೆ’ ಎಂದು ತಿಳಿಸಿದರು.
ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದರು, ” ಹೆಚ್ಚಿನ ಪ್ರಮಾಣದ ಪಿ.ಹೆಚ್.ಡಿ ಪದವೀಧರರನ್ನು ನಮ್ಮ ಬೆಂಗಳೂರು ದಕ್ಷಿಣ ಹೊಂದಿದ್ದರೂ ಕೂಡ, ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಮಾತ್ರ ಕಳಪೆ ಸಾಧನೆ ತೋರುವ ಜಿಲ್ಲೆಗಳ ಪಟ್ಟಿಯಲ್ಲಿರುವುದು ನಿಜಕ್ಕೂ ಆತಂಕಕಾರಿ. ಶಿಕ್ಷಣದಿಂದ ವಂಚಿತರಾಗಿರುವವರು ಬಡತನ, ನಿರುದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಿರುವುದು ಸುಳ್ಳಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಲು ಸಾಧ್ಯವಾಗದಿರುವ ಎಷ್ಟೋ ವಿದ್ಯಾರ್ಥಿಗಳು ಇದೇ ಕಾರಣಕ್ಕಾಗಿಯೇ ವಿದ್ಯಾಭ್ಯಾಸ ತೊರೆದಿರುವುದು ಕೂಡ ಸತ್ಯ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಲ್ಲಿ, ಎಸ್ ಎಸ್ ಎಲ್ ಸಿ ಪರೀಕ್ಷೆ ಬಗ್ಗೆ ಇರುವ ಭಯ, ಆತಂಕ ಹೋಗಲಾಡಿಸಿ, ಪರೀಕ್ಷೆ ಎದುರಿಸಲು ಅಗತ್ಯ ಮಾರ್ಗದರ್ಶನ ನೀಡುವುದೇ ಬೆಸ್ಟ್’ ನ ಮೂಲ ಉದ್ದೇಶ. ಈ ಮೂಲಕ ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಮುನ್ನುಡಿ ಬರೆಯುವುದು ನಮ್ಮ ತಂಡದ ಉದ್ದೇಶ” ಎಂದು ತಿಳಿಸಿದರು.
“ಇದೇ ಯೋಜನೆಯ ಭಾಗವಾಗಿ ಸಂಸದರ ಕಛೇರಿಯ ವತಿಯಿಂದ, ಬೆಂಗಳೂರು ದಕ್ಷಿಣ ವ್ಯಾಪ್ತಿಯ 8 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು, ಕ್ಲಾಸ್ ರೂಮ್ ಗಳನ್ನು ಡಿಜಿಟಲೀಕರಣಗೊಳಿಸಿ, ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿ ಮಾದರಿ ಶಾಲೆಗಳನ್ನಾಗಿ ಪರಿವರ್ತಿಸುವ ಸಂಕಲ್ಪ ಹೊಂದಿದ್ದೇವೆ. ಇದರೊಂದಿಗೆ ಬೆಸ್ಟ್ ಯೋಜನೆಯಡಿ 800 ಸರ್ಕಾರಿ ಶಾಲಾ ಶಿಕ್ಷಕರಿಗೆ ವಿಷಯ ಪರಿಣಿತಿ ಕುರಿತಾದ ತರಬೇತಿ ನೀಡುವುದರೊಂದಿಗೆ, 3 ಸಾವಿರಕ್ಕೂ ಅಧಿಕ ಸ್ವಯಂಸೇವಕರನ್ನು ನಿಯೋಜಿಸಿ, ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ One-to-One ಮಾರ್ಗದರ್ಶನ ನೀಡಲಾಗುವುದು” ಎಂದು ಸಂಸದರು ತಿಳಿಸಿದರು.
ಕಳೆದ ವರ್ಷದಲ್ಲಿ ಆರಂಭವಾಗಿರುವ ‘ಬೆಸ್ಟ್’ ಯೋಜನೆಯು, ಬೆಂಗಳೂರು ದಕ್ಷಿಣ ವಲಯದಲ್ಲಿನ ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸಲು ಆರಂಭಿಸಲಾಗಿದ್ದು, ಇದರಡಿಯಲ್ಲಿ 100ಕ್ಕೂ ಅಧಿಕ ಶಾಲೆಗಳ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು, ವಿಷಯ ಪರಿಣಿತರಿಂದ ಆನ್ ಲೈನ್, ಪುನರ್ಮನನ ತರಗತಿಗಳನ್ನು ಕೋವಿಡ್-19 ಪೂರ್ವ/ ನಂತರದ ದಿನಗಳಲ್ಲಿ ಆಯೋಜಿಸಿದ್ದು ವಿಶೇಷ. 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಂಜೀವಿನಿ ಗೈಡ್ ಗಳನ್ನು ವಿತರಿಸಲಾಗಿದ್ದು, ಬೇರೆ ಪ್ರದೇಶದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆನ್ ಲೈನ್ ಆವೃತ್ತಿಗಳನ್ನು ಕೂಡ ಬಿಡುಗಡೆಗೊಳಿಸಿ, ಬೇರೆ ಪ್ರದೇಶದ ವಿದ್ಯಾರ್ಥಿಗಳಿಗೂ ಕೂಡ ಅನುಕೂಲ ಕಲ್ಪಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿಯೂ ರಾಜ್ಯವ್ಯಾಪಿ ಫಲಿತಾಂಶದಲ್ಲಿ 3 ಸ್ಥಾನಗಳ ಏರಿಕೆ ಕಂಡುಬಂದಿದ್ದು ನಮ್ಮ ಪ್ರಯತ್ನದ ಸಾರ್ಥಕತೆಗಳಲ್ಲೊಂದು.
BEST programme launch – Bengaluru South Education and Social Transformation, an initiative of Tejasvi Surya https://t.co/UU8JNVTCij
— Tejasvi Surya (@Tejasvi_Surya) March 4, 2021
ಇದೇ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ವ್ಯಾಪ್ತಿಯ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಎಸ್ ರಾಜೇಂದ್ರ ರವರು ಮಾತನಾಡಿ, “ಬೆಂಗಳೂರು ದಕ್ಷಿಣ ಶೈಕ್ಷಣಿಕ ವಲಯವು ಪ್ರತೀ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕೊನೆಯ 5, 6 ಸ್ಥಾನಗಳಲ್ಲಿ ಮಾತ್ರ ಕಂಡುಬರುತ್ತಿದ್ದು, ಇದರಿಂದ ಹೊರಬರುವ ಮೂಲಕ ಇಲ್ಲಿನ ಶೈಕ್ಷಣಿಕ ಪ್ರಗತಿಗೆ ವೇದಿಕೆಯಾಗಿರುವ ‘ ಬೆಸ್ಟ್’ ಯೋಜನೆಗೆ ಶಿಕ್ಷಣ ಇಲಾಖೆಯ ಸಂಪೂರ್ಣ ಬೆಂಬಲವಿರಲಿದ್ದು, ಬೆಂಗಳೂರು ದಕ್ಷಿಣ ವಲಯದ ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸಲು ಪೂರ್ಣ ಸಹಕಾರ ನೀಡಲಿದ್ದೇವೆ” ಎಂದು ತಿಳಿಸಿದರು.