ಬೆಂಗಳೂರಿನ ಬಿಐಇಸಿಯಲ್ಲಿ ನಡೆದ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ವೇದಿಕೆಯ ಮೇಲೆ ದಾಖಲೆಯೊಂದನ್ನು ಸ್ವೀಕರಿಸುತ್ತಿರುವ ಭಾಗವಹಿಸಿದವರು. ಚಿತ್ರ: ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ
ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ಮುಂದಿನ 25 ವರ್ಷಗಳಲ್ಲಿ ಭಾರತದ ಆರ್ಥಿಕತೆ, ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ತರಲಿದೆ; ಭವಿಷ್ಯದಲ್ಲಿ ಯುದ್ಧವನ್ನು ಒಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲೂ ಎಐ ಮತ್ತು ರೋಬೋಟಿಕ್ಸ್ ಪ್ರಮುಖ ಪಾತ್ರ ವಹಿಸಲಿವೆ ಎಂದು ಐಟಿ ತಜ್ಞ ಹಾಗೂ ಉದ್ಯಮಿ ಮೋಹನ್‌ದಾಸ್ ಪೈ ವಿವರಿಸಿದರು.
ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಬುಧವಾರ ‘ಎಐ ಮತ್ತು ಭಾರತ: ಭವಿಷ್ಯದ ಚಿತ್ರಣ’ ಕುರಿತು ಮಾತನಾಡಿದ ಅವರು, ಮುಂದಿನ 25 ವರ್ಷಗಳಲ್ಲಿ ಎಐನಿಂದಾಗಿ ಹಲವು ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ ಎಂದರು.
ಸೌರಶಕ್ತಿ ಮತ್ತು ಅಣುಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆ ಹೆಚ್ಚುವುದರಿಂದ ಭವಿಷ್ಯದಲ್ಲಿ ವಿದ್ಯುತ್ ಲಭ್ಯತೆ ಹೆಚ್ಚಾಗಲಿದೆ; ಪ್ರತಿಯೊಬ್ಬ ವಿದ್ಯಾರ್ಥಿಗೂ ಕಲಿಕೆಯಲ್ಲಿ ನೆರವಾಗಲು ಎಐ ಆಧಾರಿತ ಸಹಾಯಕ ಶಿಕ್ಷಕರು ಇರುತ್ತಾರೆ; ವೈಯಕ್ತಿಕ ಆರೋಗ್ಯ ಶುಶ್ರೂಷೆಗೆ ನೆರವಾಗುವ ಎಐ ಸಹಾಯಕ ವೈದ್ಯರು ಮತ್ತು ನರ್ಸ್‌ಗಳು ಇರಲಿದ್ದಾರೆ; ಮಾನವ ಶ್ರಮದ ಅಗತ್ಯವಿರುವ ಬಹುತೇಕ ದೈನಂದಿನ ಕೆಲಸಗಳನ್ನು ರೋಬೋಟ್‌ಗಳು ಮತ್ತು ಎಐ ನಿರ್ವಹಿಸಲಿವೆ; ಪ್ರತಿಯೊಬ್ಬರೂ ಪ್ರೋಗ್ರಾಮರ್ ಆಗಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರು ಮೂಲದ ಪ್ರಮುಖ ಯೂನಿಕಾರ್ನ್ ಕಂಪನಿಗಳ ಬೆಳವಣಿಗೆಯನ್ನು ಉಲ್ಲೇಖಿಸಿದ ಪೈ, 2023ರಲ್ಲಿ ಆರಂಭವಾದ ಸರ್ವಂ ಪ್ರಸ್ತುತ 1.5 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದೆ ಎಂದರು. 2024ರಲ್ಲಿ ಆರಂಭವಾದ ಎಮರ್ಜೆಂಟ್ ಕೂಡ 1.5 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ; 2015ರಲ್ಲಿ ಆರಂಭವಾದ ನೆಟ್ರಾಡೈನ್ ಮೌಲ್ಯವೂ 1.5 ಬಿಲಿಯನ್ ಡಾಲರ್. 2023ರಲ್ಲಿ ಸ್ಥಾಪನೆಯಾದ ಕೃತ್ರಿಮ್ ಹಾಗೂ 2012ರಲ್ಲಿ ಆರಂಭವಾದ ಕಾಮರ್ಸ್‌ಐಕ್ಯೂ ತಲಾ ಒಂದು ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿವೆ ಎಂದು ತಿಳಿಸಿದರು.
ಕ್ವಾಂಟಂ ಕಂಪ್ಯೂಟರ್‌ಗಳು ಭವಿಷ್ಯದ ತಂತ್ರಜ್ಞಾನದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಯುದ್ಧಗಳಲ್ಲಿ ಎಐ ಮತ್ತು ರೋಬೋಟ್‌ಗಳ ಬಳಕೆ ಹೆಚ್ಚಾಗಲಿದೆ. ಸುದ್ದಿ ಮಾಧ್ಯಮ ಮತ್ತು ಗೇಮಿಂಗ್ ಕ್ಷೇತ್ರಗಳಲ್ಲಿಯೂ ಎಐ ಮಹತ್ವದ ಪಾತ್ರ ವಹಿಸಲಿದೆ. ಜಗತ್ತಿನ ಇತರ ದೇಶಗಳಿಗೆ ಭಾರತ ಆಧುನಿಕ ತಂತ್ರಜ್ಞಾನವನ್ನು ಒದಗಿಸುವ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಲಿದೆ. ವೈದ್ಯಕೀಯ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಪ್ರಗತಿಯಿಂದ ಮಾನವನ ಆಯುಷ್ಯ 120 ವರ್ಷಗಳಿಗೆ ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದರು.
2030ರ ವೇಳೆಗೆ ಭಾರತದಲ್ಲಿನ ಡೇಟಾ ಸೆಂಟರ್‌ಗಳ ಸಾಮರ್ಥ್ಯ ಐದು ಪಟ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಿದ ಅವರು, ಎಐ ತಂತ್ರಜ್ಞಾನದ ಅಭಿವೃದ್ಧಿ ಮತ್ತು ವಿಸ್ತರಣೆಗೆ ವಿದ್ಯುತ್ ಶಕ್ತಿ, ಸೆಮಿಕಂಡಕ್ಟರ್ ಚಿಪ್‌ಗಳು, ಡೇಟಾ ಸೆಂಟರ್‌ಗಳು, ತಾಂತ್ರಿಕ ಮಾದರಿಗಳು ಮತ್ತು ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳು ಎಂಬ ಐದು ಪ್ರಮುಖ ಕ್ಷೇತ್ರಗಳು ಅಗತ್ಯ ಎಂದು ವಿವರಿಸಿದರು. ಈ ಕ್ಷೇತ್ರಗಳಲ್ಲಿ ಸಾಮರ್ಥ್ಯ ಬಲಪಡಿಸುವುದು ಎಐಯ ಭವಿಷ್ಯದ ಬೆಳವಣಿಗೆಗೆ ನಿರ್ಣಾಯಕ ಎಂದು ಅವರು ಹೇಳಿದರು.
ಸಮಿಟ್‌ನಲ್ಲಿ ಬಿಡುಗಡೆಯಾದ ಬೆಂಗಳೂರು ಇನ್ನೋವೇಶನ್ ವರದಿ 2026 ಪ್ರಕಾರ, ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3ರಷ್ಟು ಬೆಂಗಳೂರಿಗೆ ಹೋಗಿದೆ.
