ಬೆಂಗಳೂರಿನ ಬಿಐಇಸಿಯಲ್ಲಿ ಬುಧವಾರ ನಡೆದ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಬೆಂಗಳೂರು ಇನ್ನೋವೇಶನ್ ವರದಿ 2026ರ ಪ್ರತಿಗಳೊಂದಿಗೆ ಗಣ್ಯರು. ಚಿತ್ರ: ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ
ಬೆಂಗಳೂರು: ವೈದ್ಯಕೀಯ ವಲಯದಲ್ಲಿ ಎಐ ತಂತ್ರಜ್ಞಾನ ಬಳಕೆಯ ಮೂಲಕ ರೋಗಿಗಳ ದತ್ತಾಂಶ ಸಂಗ್ರಹಣೆ ಮತ್ತು ವೈದ್ಯರ ಸಮಯ ಉಳಿತಾಯ ಸಾಧ್ಯವಾಗಲಿದ್ದು, ಮುಂದಿನ ಐದು ವರ್ಷಗಳಲ್ಲಿ ಈ ವಲಯದಲ್ಲಿ ಕ್ರಾಂತಿಕಾರಕ ಪರಿವರ್ತನೆಯಾಗಲಿದೆ ಎಂದು ಕಿಮ್ಸ್ ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ತಜ್ಞ ಡಾ. ಗೌರವ್ ರವಿಕುಮಾರ್ ಹೇಳಿದ್ದಾರೆ.
ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಬುಧವಾರ ‘ದೀರ್ಘಾಯುಷ್ಯ ಮತ್ತು ಆರೋಗ್ಯ ನಿಖರತೆಗಾಗಿ ಎಐ’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ರೋಗ ಚಿಕಿತ್ಸೆ ಹಾಗೂ ರೋಗ ತಡೆ ಎರಡೂ ವಲಯಗಳಲ್ಲಿ ಎಐ ಪ್ರಧಾನ ಪಾತ್ರ ವಹಿಸಲಿದೆ ಎಂದರು.
ದಶಕಗಳ ಹಿಂದೆ ರೋಬೋಟಿಕ್ಸ್ ಶಸ್ತ್ರಚಿಕಿತ್ಸೆಯ ಫಲಿತಾಂಶದ ಬಗ್ಗೆ ಸಂದೇಹಗಳಿದ್ದವು. ಆದರೆ ಈಗ ತಂತ್ರಜ್ಞಾನದ ನೆರವಿನಿಂದ ಶಸ್ತ್ರಚಿಕಿತ್ಸೆಯಲ್ಲಿ ನಿಖರತೆ, ಅಡ್ಡ ಪರಿಣಾಮ ಕಡಿಮೆ, ಚೇತರಿಕೆ ಪ್ರಮಾಣ ಹೆಚ್ಚಳ ಸಾಧ್ಯವಾಗಿದೆ; ವೈದ್ಯರು ಸಾವಿರಾರು ಕಿಲೋಮೀಟರ್ ದೂರದಿಂದಲೇ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವುದು ಸಾಧ್ಯವಾಗಿದೆ. ಎಐ ಬಳಕೆಯಿಂದ ಮುಂದಿನ ದಿನಗಳಲ್ಲಿ ವ್ಯಕ್ತಿ-ನಿರ್ದಿಷ್ಟ ಚಿಕಿತ್ಸೆ ಹಾಗೂ ಹೆಚ್ಚಿನ ನಿಖರತೆ ಸಾಧ್ಯವಾಗಲಿದೆ ಎಂದರು.
ಏಕ ಕೇರ್ (Eka Care) ಸಂಸ್ಥೆಯ ಸಂಸ್ಥಾಪಕ ದೀಪಕ್ ಟುಲಿ ಮಾತನಾಡಿ, ಎಐ ಬಳಕೆಯಿಂದ ರೋಗಿಗಳ ಹಾಗೂ ರೋಗದ ದತ್ತಾಂಶ ಸಂಗ್ರಹ ಮತ್ತು ದಾಖಲೀಕರಣ ಸರಳವಾಗಲಿದ್ದು, ಇದರಿಂದ ತಪಾಸಣೆ ಮತ್ತು ಪರೀಕ್ಷೆಗಳ ಪುನರಾವರ್ತನೆ ತಪ್ಪಲಿದೆ ಎಂದರು. ಸಾಂಪ್ರದಾಯಿಕ ಪದ್ಧತಿಯಲ್ಲಿ ವೈದ್ಯರು ರೋಗಿಗಳನ್ನು ಪರೀಕ್ಷಿಸಿ ಅವರೊಂದಿಗೆ ನೇರ ಸಂವಾದ ನಡೆಸುವುದಕ್ಕಿಂತ ಹೆಚ್ಚಾಗಿ ದತ್ತಾಂಶ ದಾಖಲಿಸುವುದರಲ್ಲೇ ಸಮಯ ವ್ಯರ್ಥವಾಗುತ್ತಿತ್ತು; ಎಐ ಬಳಕೆ ಇದನ್ನು ತಪ್ಪಿಸಿ ವೈದ್ಯ ಮತ್ತು ರೋಗಿಯ ಸಂವಾದಕ್ಕೆ ಹೆಚ್ಚು ಸಮಯಾವಕಾಶ ಕಲ್ಪಿಸಲಿದೆ ಎಂದು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ಪ್ರತಿ ರೋಗಿಗೆ ಒಬ್ಬ ಎಐ ವೈದ್ಯ ಎಂಬ ಪರಿಕಲ್ಪನೆ ಸಾಕಾರವಾಗಲಿದೆ. ಕಡಿಮೆ ಸಮಯದಲ್ಲಿ ಹೆಚ್ಚು ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆ ಸಾಧ್ಯವಾಗಲಿದ್ದು, ಚಿಕಿತ್ಸಾ ವೆಚ್ಚವೂ ಗಣನೀಯವಾಗಿ ಇಳಿಯಲಿದೆ ಎಂದು ಟುಲಿ ವಿವರಿಸಿದರು.
ಡೋಝೀ (Dozee) ಸಂಸ್ಥೆಯ ಸಂಸ್ಥಾಪಕ ಗೌರವ್ ಪರ್ಚಾನಿ, ಎಐ ಬಳಕೆಯಿಂದ ಹಿರಿಯ ವಯೋಮಾನದ ರೋಗಿಗಳ ಮೇಲೆ ನಿರಂತರ ನಿಗಾ ವಹಿಸಲು ಸಾಧ್ಯವಾಗಲಿದ್ದು, ತಮ್ಮ ಬಗ್ಗೆ ಒಬ್ಬ ವೈದ್ಯರು ನಿರಂತರ ಕಾಳಜಿ ವಹಿಸುತ್ತಿದ್ದಾರೆ ಎಂಬ ಸಮಾಧಾನ ರೋಗಿಗಳಿಗೆ ಸಿಗಲಿದೆ ಎಂದರು. ತಂತ್ರಜ್ಞಾನ ಅಭಿವೃದ್ಧಿಯಿಂದ ಉಪಕರಣ ಆಧಾರಿತ ಚಿಕಿತ್ಸೆಗಿಂತ ಫಲಿತಾಂಶ ಆಧಾರಿತ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ದೊರೆಯಲಿದೆ; ಎಐ ಚಿಕಿತ್ಸೆ ಕೆಲವರ ಆಸ್ತಿ ಎಂಬ ಧೋರಣೆ ಬದಲಾಗಿ ಎಲ್ಲರಿಗೂ ಈ ಚಿಕಿತ್ಸೆ ಲಭ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇಂಟಿಗ್ರೋ ಇನ್ಫೋಟೆಕ್ ಸಂಸ್ಥೆಯ ಜೋಸ್ ಜೇಕಬ್ ಕಲಾಯಿಲ್ ಸಂವಾದ ನಿರ್ವಹಿಸಿದರು.
ಸಮಿಟ್‌ನಲ್ಲಿ ಮಾತನಾಡಿದ ಮತ್ತೊಬ್ಬ ತಜ್ಞ ಮೋಹನ್‌ದಾಸ್ ಪೈ, ಭವಿಷ್ಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಎಐ ಟೀಚರ್ ಇರಲಿದ್ದಾರೆ ಎಂದಿದ್ದಾರೆ.
