ಕಡತ ಚಿತ್ರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ. ಚಿತ್ರ: ಕೆಇಎ.
ಬೆಂಗಳೂರು: ಪಿಜಿ ವೈದ್ಯಕೀಯ (ಸ್ನಾತಕೋತ್ತರ ವೈದ್ಯಕೀಯ) ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದ್ದು, ಈ ಸುತ್ತಿನಲ್ಲಿ ಲಭ್ಯವಿದ್ದ 4,388 ಸೀಟುಗಳ ಪೈಕಿ 3,268 ಸೀಟುಗಳನ್ನು ಹಂಚಿಕೆ ಮಾಡಿದೆ. ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಸೀಟು ಹಂಚಿಕೆಯಾದ ಅಭ್ಯರ್ಥಿಗಳು ನ.11ರ ಬೆಳಿಗ್ಗೆ 11 ಗಂಟೆಯವರೆಗೆ ಚಾಯ್ಸ್ ದಾಖಲಿಸಬಹುದು. ಪ್ರತಿಯೊಂದು ಚಾಯ್ಸ್ನ ಪರಿಣಾಮವನ್ನು ಅರಿತುಕೊಂಡು ನಾಲ್ಕು ಚಾಯ್ಸ್ಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಬೇಕು ಎಂದು ಕೆಇಎ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
ಚಾಯ್ಸ್-1 ಅಥವಾ ಚಾಯ್ಸ್-2 ದಾಖಲಿಸಿದವರು ನ.11ರ ಸಂಜೆ 4 ಗಂಟೆಯೊಳಗೆ ಶುಲ್ಕದ ಚಲನ್ ಡೌನ್ಲೋಡ್ ಮಾಡಿಕೊಂಡು, ನ.12ರೊಳಗೆ ಬ್ಯಾಂಕ್ ಕೆಲಸದ ಅವಧಿಯಲ್ಲಿ ಶುಲ್ಕ ಪಾವತಿಸಬೇಕು.
ಶುಲ್ಕ ಪಾವತಿಸಿದ ಚಾಯ್ಸ್-1 ಅಭ್ಯರ್ಥಿಗಳು ನ.11ರಿಂದ ನ.13ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಯಲ್ಲಿ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಚಾಯ್ಸ್-1 ಪ್ರಿಂಟ್ಔಟ್, ವೆರಿಫಿಕೇಷನ್ ಸ್ಲಿಪ್, ಶುಲ್ಕ ಪಾವತಿ ರಸೀದಿ, ವೆರಿಫಿಕೇಷನ್ ಸ್ಲಿಪ್ನಲ್ಲಿ ಸೂಚಿಸಿರುವ ಎಲ್ಲ ಮೂಲ ಅನುಬಂಧಗಳು ಹಾಗೂ ದಾಖಲೆಗಳು ಮತ್ತು ಇವೆಲ್ಲದರ ಎರಡು ಸೆಟ್ ಪ್ರತಿಗಳನ್ನು ತರಬೇಕು.
ಮೂಲ ದಾಖಲೆಗಳನ್ನು ಸಲ್ಲಿಸಿದ ಬಳಿಕ ಚಾಯ್ಸ್-1 ಅಭ್ಯರ್ಥಿಗಳು ನ.11ರಿಂದ ನ.13ರವರೆಗೆ ಪ್ರವೇಶ ಆದೇಶದ ಅಭ್ಯರ್ಥಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಂಚಿಕೆಯಾದ ವೈದ್ಯಕೀಯ ಕಾಲೇಜಿಗೆ ವರದಿ ಮಾಡಿಕೊಳ್ಳಲು ನ.14ರ ಸಂಜೆ 5.30 ಕೊನೆಯ ಗಡುವು.
ಕಾಲೇಜಿಗೆ ವರದಿ ಮಾಡಿಕೊಳ್ಳುವಾಗ ಪ್ರವೇಶ ಆದೇಶದ ಅಭ್ಯರ್ಥಿ ಪ್ರತಿ, ಎಲ್ಲ ಅನುಬಂಧಗಳು ಹಾಗೂ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್, ವೆರಿಫಿಕೇಷನ್ ಸ್ಲಿಪ್ ಹಾಗೂ ಒಟಿಪಿ ಪಡೆಯಲು ಮೊಬೈಲ್ ಫೋನ್ ತರಬೇಕು. ಒಟಿಪಿ ದೃಢೀಕರಣ ಮತ್ತು ಮುಖ ಗುರುತಿಸುವಿಕೆಯ ಮೂಲಕ ಭಾವಚಿತ್ರ ಪರಿಶೀಲನೆಯ ನಂತರ ಕಾಲೇಜು ಪ್ರವೇಶ ಆದೇಶದ ಕಾಲೇಜು ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳುತ್ತದೆ. ಆ ಬಳಿಕವೇ ಪ್ರವೇಶ ಪೂರ್ಣಗೊಂಡಂತೆ ಪರಿಗಣಿಸಲಾಗುತ್ತದೆ ಎಂದು ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನೂ ಕೆಇಎ ಬಿಡುಗಡೆ ಮಾಡಿದೆ. ಪ್ರಾಧಿಕಾರವು ಈ ಹಿಂದೆ ಪಿಜಿ ವೈದ್ಯಕೀಯ ಮೊದಲ ಸುತ್ತಿನ ಅಂತಿಮ ಹಂಚಿಕೆಯ ಗಡುವುಗಳನ್ನು ಪ್ರಕಟಿಸಿತ್ತು.
