ಡಿಜಿಟಲ್ ವ್ಯಾಲೆಟ್ ಕ್ರಾಂತಿ

  65
  0
  bengaluru

  ಎಳೆನೀರು ಕುಡಿದು ಜೇಬಿಗೆ ಕೈ ಹಾಕಿದರೆ ಪರ್ಸ್ ಮರೆತು ಬಂದಿದ್ದೆ. ನನ್ನ ಅವಸ್ಥೆ ನೋಡಿ ಎಳೆನೀರು ಮಾರುವವನು ಸಾರ್, ಅದಕ್ಕೆ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ? ಮೊಬೈಲ್ ಇದೆಯಲ್ಲ ಪೇಟಿಎಂನಿಂದ ಹಣ ವರ್ಗಾಯಿಸಿ ಎಂದು ಬಾರ್ ಕೋಡ್ ಬೋರ್ಡ್ ಮುಂದೆ ಇಡುವುದಾ!

  ನಾನು ನಿಮ್ಮ ಚಿಕ್ಕಪ್ಪ ಮಾತಾಡೋದು… ಸ್ವಲ್ಪ ಊರಿಗೆ ಬಂದು ಹೋಗಪ್ಪಾ. ಇತ್ತೀಚೆಗೆ ರಸಗೊಬ್ಬರ ಖರೀದಿಸುವುದಕ್ಕೆ ಬರುತ್ತಿರುವವರು ಪೇಟಿಎಂ ಅಥವಾ ಗೂಗಲ್ ಪೇ ಇದೆಯಾ ಎಂದು ಕೇಳುತ್ತಾರೆ. ನನ್ನ ಬಳಿ ಇಲ್ಲ ಅಂದರೆ ಬೇರೆ ಅಂಗಡಿಗೆ ಹೋಗುತ್ತೇವೆ ಎನ್ನುತ್ತಾರೆ. ಸ್ವಲ್ಪ ಬಂದು ನನ್ನ ಮೊಬೈಲ್ ಗೆ ಪೇಮೆಂಟ್ ಸಾಧನವನ್ನು ಹಾಕಿಕೊಡು ಎಂದು ಕೊರಟಗೆರೆ ತಾಲೂಕಿನ ಅಕ್ಕಿಮಾರನ ಹಳ್ಳಿಯಿಂದ ಫೋನ್ ಬರುತ್ತೆ.

  70 ವರ್ಷದ ಸುಶೀಲಮ್ಮ, ಕೋವಿಡ್ ಕಾರಣ ಎಲ್ಲಾ ಅಂಗಡಿಗಳು ಲಾಕ್ ಡೌನ್, ಹೊರಗೆ ಹೋಗಲು ಧೈರ್ಯ ಬಾರದೆ ದಿನಸಿ ಮತ್ತು ತರಕಾರಿಯನ್ನ ಆನ್ ಲೈನ್ ನಲ್ಲಿ ಖರೀದಿಸಿ ಮೊಬೈಲ್ ವ್ಯಾಲೆಟ್ ನಲ್ಲಿ ಹಣ ಪಾವತಿ ಮಾಡುತ್ತಾರೆ. ಕ್ಷಣಾರ್ಧದಲ್ಲಿ ವಹಿವಾಟು ಮುಗಿದು ಹೋಗಿರುತ್ತದೆ. ದೇಶದಲ್ಲಿ ಇಂದು ನಡೆಯುತ್ತಿರುವ ಡಿಜಿಟಲ್ ಹಣ ಪಾವತಿಯ ಜನಪ್ರಿಯತೆಯು ಜನಜೀವನದ ಎಲ್ಲಾ ಹಂತಗಳನ್ನು ತಲುಪಿ ದೈನಂದಿನ ಚಟುವಟಿಕೆಯ ಅವಿಭಾಜ್ಯ ಅಂಗವಾಗಿದೆ.

  ನೆಹರು ಕಾಲದ ಹಾವಾಡಿಸುವವರ ದೇಶದ ಕುಖ್ಯಾತಿಯಿಂದ ಇಂದಿರಾ ಗಾಂಧಿ ಕಾಲದಲ್ಲಿ ನಿರಂಕುಶ ಆಡಳಿತದ ಅಪಖ್ಯಾತಿಯಿಂದ ರಾಜೀವ್ ಗಾಂಧಿಯವರ ಕಾಲದ ರಕ್ಷಣಾ ಇಲಾಖೆಯ ಭ್ರಷ್ಟಾಚಾರದ ಸುದ್ದಿಯಿಂದ ಪಿ.ವಿ.ನರಸಿಂಹ ರಾವ್ ಸರ್ಕಾರದ ಆರ್ಥಿಕ ಸುಧಾರಣೆಯಿಂದ, ವಾಜಪೇಯಿಯವರ ಸುವರ್ಣ ಚತುಷ್ಪತ ಯೋಜನೆಯಿಂದ ಮತ್ತು ಅನಂತರದ ಮನಮೋಹನ ಸಿಂಗ್ ರವರ ಅವಧಿಯು ಕಡು ಭ್ರಷ್ಟಾಚಾರ ಹಗರಣಗಳಿಂದ ಕುಖ್ಯಾತಿ ಪಡೆದ ಇತಿಹಾಸದಿಂದ ಮೋದಿ ಸರ್ಕಾರವು ಡಿಜಿಟಲ್ ಹಣ ಪಾವತಿಯ ಕ್ರಾಂತಿಗೆ ಖ್ಯಾತಿಯನ್ನು ಗಳಿಸಿದೆ.

  bengaluru
  Prakash Sesharaghavachar

  ಬದಲಾದ ಭಾರತ ಕಳೆದ 5 ವರ್ಷದಲ್ಲಿ ಡಿಜಿಟಲ್ ಹಣ ಪಾವತಿಯಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಡಿಮಾನಿಟೈಸೇಷನ್ ಮತ್ತು ಕೋವಿಡ್ ಸೋಂಕಿನ ನಂತರ ದೇಶದಲ್ಲಿ ಡಿಜಿಟಲ್ ಪೇಮೆಂಟ್ ಬಳಕೆಯು ದಾಖಲೆ ಪ್ರಮಾಣವನ್ನು ತಲುಪಿದೆ. 2014 ಮುನ್ನ ಡಿಜಿಟಲ್ ಹಣದ ಬಳಕೆಯು ಅತ್ಯಲ್ಪವಿತ್ತು. ಕೇವಲ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಬಳಕೆ ಮತ್ತು ಬ್ಯಾಂಕ್ ಮೂಲಕ ಹಣ ವರ್ಗಾವಣೆಗೆ ಮತ್ತು ಇಂಟರ್ನೆಟ್ ಬ್ಯಾಂಕಿಗ್ ಗೆ ಸೀಮಿತವಾಗಿತ್ತು.

  ಡಿಜಿಟಲ್ ಪೇಮೆಂಟ್ ಬಳಕೆಗೆ ಉತ್ತೇಜಿಸಲು 2008 ರಲ್ಲಿ ರಾಷ್ಚ್ರೀಯ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ ಸ್ಥಾಪಿಸಲಾಯಿತು. ಈ ಸಂಸ್ಥೆಯು ಡಿಜಿಟಲ್ ಪೇಮೆಂಟ್ ನಡೆಯಲು ಬೇಕಾದ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ವೇದಿಕೆಯಾಗಿದೆ. ಏಕೀಕೃತ ಪಾವತಿ ಸಂಪರ್ಕ ಸಾಧನೆಯನ್ನು ರೂಪಿಸಿ (Unified Payment Interface) ಡಿಜಿಟಲ್ ಹಣ ಪಾವತಿಯಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ.

  ಭಾರತದಲ್ಲಿ 20-21ರಲ್ಲಿ 5 ಲಕ್ಷ ಕೋಟಿ ರೂಪಾಯಿಗಳ ಡಿಜಿಟಲ್ ಹಣಪಾವತಿ ನಡೆದು ಅಮೇರಿಕಾ ಮತ್ತು ಚೀನಾ ದೇಶವನ್ನು ಹಿಂದೆ ಹಾಕಿ ವಿಶ್ವದಲ್ಲಿ ನಂ1 ಸ್ಥಾನವನ್ನು ಪಡೆದಿದೆ. ಆರ್ಥಿಕ ತಜ್ಞರ ಪ್ರಕಾರ 2024ರಲ್ಲಿ ಶೇಕಡಾ 50ರಷ್ಟು ವಹಿವಾಟುಗಳು ಡಿಜಿಟಲ್ ಹಣದ ಪಾವತಿಯ ಮೇಲೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ. 2025ಕ್ಕೆ ಈ ಪ್ರಮಾಣ 71.7% ತಲುಪುವ ನಿರೀಕ್ಷೆ ಮಾಡಲಾಗಿದೆ.

  ಇದಕ್ಕೆ ವ್ಯತಿರಿಕ್ತವಾಗಿ 2018ರಲ್ಲಿ 83% ನಗದು ವ್ಯವಹಾರ ನಡೆದಿತ್ತು. 20-21ರಲ್ಲಿ ಇದರ ಪ್ರಮಾಣ 61.4%ಗೆ ಕುಸಿಯಿತು. ಡಿಜಿಟಲ್ ಹಣದ ವ್ಯವಹಾರಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವ ಕಾರಣ 2025 ರಲ್ಲಿ ನಗದು ವ್ಯವಹಾರವು ಶೇಕಡಾ 50ಕ್ಕಿಂತಕಡಿಮೆಯಾಗುವುದು ಎಂದು ಅಂದಾಜಿಸಲಾಗಿದ. 2016 ರಲ್ಲಿ ಯುಪಿಐ ವೇದಿಕೆಯನ್ನು ಪ್ರಾರಂಭಿಸಿದಾಗ ಕೇವಲ 21 ಬ್ಯಾಂಕ್ ಗಳು ಇದ್ದವು. ಈಗ 216 ಬ್ಯಾಂಕ್ ಗಳು ಈ ವೇದಿಕೆಯಲ್ಲಿ ಇರುವುದು.

  ಯೂ ಗೌ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 67ರಷ್ಟು ನಗರ ಪ್ರದೇಶದ ಮಹಿಳೆಯರು ಡಿಜಿಟಲ್ ಪೇಮೆಂಟ್ ಬಳಕೆ ಮಾಡುತ್ತಿದ್ದೇವೆ ಎಂದಿದ್ದಾರೆ

  ಮನೆಗೆಲಸದವರು ಕೂಡಾ ಈಗ ತಮ್ಮ ಸಂಬಳವನ್ನು ಡಿಜಿಟಲ್ ಮೂಲಕ ಪಡೆಯುತ್ತಿದ್ದಾರೆ. ಡಿಜಿಟಲ್ ಹಣ ಪಾವತಿಯು ಕೋವಿಡ್ ಅವಧಿಯಲ್ಲಿ ಇದೊಂದು ವರವಾಗಿದೆ.

  ಈ ಮೊದಲು ತೆರಿಗೆ ನೀಡದೆ ನಗದು ವ್ಯವಹಾರಗಳು ಬಹು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದವು. ಆದರೆ ಡಿಜಿಟಲ್ ಪೇಮೆಂಟ್ ಬಂದ ತರುವಾಯ ಸರ್ಕಾರಗಳಿಗೆ ತೆರಿಗೆ ಸಂಗ್ರಹವು ಹೆಚ್ಚಾಗಿದೆ. ಇದರಿಂದ ಕಪ್ಪುಹಣ ಉತ್ಪತ್ತಿಗೂ ಕಡಿವಾಣ ಬಿದ್ದಿದೆ.

  ಮೋದಿ ಸರ್ಕಾರವು ಕಪ್ಪುಹಣ ತೊಡೆದು ಹಾಕಲು ಸದ್ದಿಲ್ಲದೆ ನಡೆಸಿರುವ ಕಾರ್ಯಾಚರಣೆಯ ಭಾಗವು ಇದಾಗಿದೆ. ಅಪನಗದೀಕರಣದ ಪ್ರಯೋಜನವನ್ನು ಪ್ರಶ್ನಿಸುವವರಿಗೆ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಡಿಜಿಟಲ್ ಹಣ ಪಾವತಿಯು ಉತ್ತರ ನೀಡುತ್ತಿದೆ.

  ಸದ್ಯ ಫೋನ್ ಪೇ ದೇಶದ ಡಿಜಿಟಲ್ ಮಾರುಕಟ್ಟೆಯ ಶೇಕಡಾ 43.9 ರಷ್ಟು ವಹಿವಾಟಿನಲ್ಲಿ ಪಾಲಿದೆ ಹಾಗೆಯೇ ಗೂಗಲ್ ಪೇ ಶೇಕಡಾ 35 ರಷ್ಟು 3ನೇ ಸ್ಥಾನದಲ್ಲಿದೆ. ಪೇಟಿಎಂ ಮತ್ತು ಪೇಮೆಂಟ್ ಕಾರ್ಪೋರೇಶನ್ ಅಭಿವೃದ್ಧಿಪಡಿಸಿರುವ ಭೀಮ್ ಆಪ್ 4ನೇ ಸ್ಥಾನದಲ್ಲಿ ಇರುವುದು.

  ಇ-ಕಾಮರ್ಸ್ ಕ್ಷೇತ್ರಕ್ಕೆ ಡಿಜಿಟಲ್ ಪೇಮೆಂಟ್ ಸೌಲಭ್ಯ ವರವಾಗಿ ಪರಿಣಮಿಸಿದೆ. ಅಮೆಜಾನ್, ಫ್ಲಿಪ್ ಕಾರ್ಟ್, ಜಿಯೋ ಮಾರ್ಟ್ ಅಷ್ಟೇ ಅಲ್ಲ ಸ್ವಿಗ್ಗಿ, ಜೊಮ್ಯಾಟೋ ಮುಂತಾದ ವಿತರಣಾ ಕಂಪನಿಗಳ ಬೆಳವಣಿಗೆಯಲ್ಲಿ ಮೊಬೈಲ್ ಪೇಮೆಂಟ್ ಬಹು ದೊಡ್ಡ ಪಾತ್ರವಹಿಸಿದೆ. ಅಂಗೈಯಲ್ಲಿ ಅರಮನೆ ನೋಡುವ ಕಾಲದಿಂದ ಈಗ ಅಂಗೈಯಲ್ಲಿ ಮೊಬೈಲ್ ಒಂದಿದ್ದರೆ ಪ್ರಪಂಚವನ್ನೇ ನೋಡ ಬಹುದಾಗಿದೆ.

  ಡಿಜಿಟಲ್ ಪೇಮೆಂಟ್ ಈಗ ಕೇವಲ ದೊಡ್ಡ ನಗರಗಳಲ್ಲಿ ಮಾತ್ರ ಬಳಕೆಯಾಗುತ್ತಿಲ್ಲ. ಎರಡು ಮತ್ತು ಮೂರನೆ ಹಂತದ ನಗರಗಳಲ್ಲದೇ ಹೋಬಳಿ ಮಟ್ಟದಲ್ಲಿಯೂ ಬಳಕೆಗೆ ಬಂದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.ದೇಶದಲ್ಲಿ ಈಗ ನೂರು ಕೋಟಿ ಬ್ಯಾಂಕ್ ಖಾತೆಗಳು ಆಧಾರ್ ನೊಂದಿಗೆ ಜೋಡಣೆಯಾಗಿ ಸೋರಿಕೆಗೆ ಆಸ್ಪದವಿಲ್ಲದಾಗಿದೆ.

  ಮೋದಿಯವರ ದೂರದೃಷ್ಟಿಯ ಫಲವಾಗಿ ಸೋರಿಕೆ ಮತ್ತು ಮಧ್ಯವರ್ತಿಗಳ ಕಾಟವನ್ನು ನಿವಾರಿಸಲು ಸರ್ಕಾರದ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ನಗದು ವರ್ಗಾವಣೆ ಮಾಡಲು ಜನ್ ಧನ್ ಖಾತೆ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸೇರಿ ಜಾಮ್ ವೇದಿಕೆಯು ನಿರ್ಮಾಣ ಮಾಡಿರುವ ಕಾರಣ ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ನೇರವಾಗಿ ಜಮಾ ಮಾಡಲಾಗುತ್ತಿದೆ. ತತ್ಪರಿಣಾಮವಾಗಿ ತ್ವರಿತವಾಗಿ ಹಣ ಪಡೆಯಲು ಇದರಿಂದ ಸಹಕಾರಿಯಾಗಿದೆ.

  The Digital Wallet Revolution

  ಇಲ್ಲಿಯತನಕ ಕೇಂದ್ರ ಸರ್ಕಾರ 319 ಯೋಜನೆಗಳ 4.30ಲಕ್ಷ ಕೋಟಿ ರೂಪಾಯಿ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದೆ. ತನ್ಮೂಲಕ ದೊಡ್ಡ ಪ್ರಮಾಣದ ಸೋರಿಕೆಯು ತಡೆಯಲು ಸಾಧ್ಯವಾಗಿ 1.80ಲಕ್ಷ ಕೋಟಿ ರೂಪಾಯಿ ಸರ್ಕಾರಕ್ಕೆ ಉಳಿತಾಯವಾಗಿದೆ. ಡಿಸೆಂಬರ್ 2020ರಲ್ಲಿ 42 ಕೋಟಿ ಬಡವರು 68,903 ಕೋಟಿ ರೂಪಾಯಿ ಆರ್ಥಿಕ ಸಹಾಯ ಪಡೆದಿದ್ದಾರೆ. ಕೋವಿಡ್ ಸಂಕಟದ ಸಮಯದಲ್ಲಿ, ಗರೀಬ್ ಕಲ್ಯಾಣ ನಿಧಿಯನ್ನು 3 ಬಾರಿ ಜನಧನ್ ಖಾತೆಗೆ ವರ್ಗಾಯಿಸಲಾಯಿತು. ಹಾಗೆಯೇ ಕಿಸಾನ್ ಸಮ್ಮಾನ್ ಯೋಜನೆಯ ಹಣವು 11 ಕೋಟಿ ರೈತರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.

  ಮೊಬೈಲ್ ಬ್ಯಾಂಕಿಗ್ ಜನಪ್ರಿಯವಾಗಿರುವ ಕಾರಣ ಪದೇಪದೆ ಬ್ಯಾಂಕ್ ಗೆ ಹೋಗುವ ಪ್ರಮೇಯವಿಲ್ಲದಂತಾಗಿದೆ. ಪಾಸ್ ಬುಕ್ ಬರೆಸಬೇಕಾದ ಜಂಜಾಟವು ಇಲ್ಲವಾಗಿದೆ.

  ನಗದು ವ್ಯವಹಾರವು ಕಡಿಮೆಯಾದ ಹಾಗೆ ನೋಟುಗಳ ಮುದ್ರಣವು ಕಡಿಮೆಯಾಗುವುದು. ಇದರಿಂದ ಪರಿಸರಕ್ಕೂ ಲಾಭ ಮತ್ತು ಹಣ ಸಾಗಣೆಯ ವೆಚ್ಚದಲ್ಲಿಯೂ ಅಪಾರ ಉಳಿತಾಯವಾಗುತ್ತಿದೆ.

  ಡಿಜಿಟಲ್ ವ್ಯಾಲೆಟ್ ಜನಪ್ರಿಯತೆಯಿಂದ ಉದ್ಯಮಗಳಿಗೆ ಹೆಚ್ಚಿನ ಪ್ರಯೋಜನವಾಗಿದೆ. ಹಣ ಜಮೆಯಾಗಲು ತಡವಾಗುವುದಿಲ್ಲ ಮತ್ತು ಸಮಯದ ಉಳಿತಾಯವಾಗುತ್ತಿದೆ. ದೇಶದ ಮೂಲೆ ಮೂಲೆಗೂ ಹಣವನ್ನು ಸುಲಭವಾಗಿ ವರ್ಗಾಯಿಸಬಹುದಾಗಿದೆ.

  ರಾಷ್ಟ್ರೀಯ ಪೇಮೆಂಟ್ ನಿಗಮದ ಮಾದರಿ ಖಾಸಗಿ ಕಂಪನಿಗಳಿಗೂ ಪ್ರವೇಶ ಕೊಡಲು ರಿಸರ್ವ್ ಬ್ಯಾಂಕ್ ನಿರ್ಣಯಿಸಿದೆ. ಈಗಾಗಲೇ 12 ಕಂಪನಿಗಳು ಇದರಲ್ಲಿ ಆಸಕ್ತಿ ತೋರಿವೆ. ಮುಂದಿನ ದಿನಗಳಲ್ಲಿ ಡಿಜಿಟಲ್ ವ್ಯಾಲೆಟ್ ಹೊಸ ಮಜಲಿಗೆ ಕೊಂಡೊಯ್ಯಲು ಖಾಸಗಿಯವರ ಪ್ರವೇಶ ಮತ್ತಷ್ಟು ಸಹಾಯಕವಾಗುವುದು.

  ದೇಶದ ಶೇಕಡಾ 55ರಷ್ಟು ಜನರಿಗೆ ಇಂಟರ್ನೆಟ್ ಸೌಲಭ್ಯ ಲಭ್ಯವಿದೆ. ಇಂಟರ್ನೆಟ್ ಬಳಸುವವರ ಸಂಖ್ಯೆಯು ವೇಗವಾಗಿ ಬೆಳೆಯುತ್ತಿದೆ. ಪ್ರಸ್ತುತ ಪ್ರಪಂಚದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ.

  ಭಾರತ ಸರ್ಕಾರ ಭಾರತ್ ನೆಟ್ ಯೋಜನೆಯಡಿಯಲ್ಲಿ ಈಗಾಗಲೇ 1,42,000 ಗ್ರಾಮ ಪಂಚಾಯತಿಗಳಿಗೆ ಓಎಫ್ ಸಿ ಸಂಪರ್ಕ ನೀಡಿದೆ. 2024ರೊಳಗೆ ಪ್ರತಿ ಗ್ರಾಮಗಳಿಗೂ ಇದನ್ನು ವಿಸ್ತರಿಸುವ ಮಹತ್ತರ ಯೋಜನೆಯು ಅನುಷ್ಠಾನದ ಹಂತದಲ್ಲಿ ಇರುವುದು. ಅಂರ್ತಜಾಲ ಸೌಕರ್ಯ ವಿಸ್ತರಿಸಿದಷ್ಟು ಡಿಜಿಟಲ್ ಹಣ ಪಾವತಿಗೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಮಾಡಲು ಅನುಕೂಲವಾಗುವುದು.

  ಡಿಜಿಟಲ್ ಪೇಮೆಂಟ್ ಎಷ್ಟು ಪ್ರಯೋಜನಕಾರಿಯೊ ಎಚ್ಚರ ತಪ್ಪಿದರೆ ಅಷ್ಟೇ ಅಪಾಯಕಾರಿಯೂ ಕೂಡಾ. 53 ಸಾವಿರ ಸೈಬರ್ ಅಪರಾಧಗಳಿಂದ 2020ರಲ್ಲಿ 11,58,000 ಸಾವಿರ ತಲುಪಿದೆ. ಹೆಚ್ಚುತ್ತಿರುವ ಸೈಬರ್ ಕ್ರೈಂ ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಸೈಬರ್ ಅಪರಾಧಗಳಿಗೆ ಹೊಸ ಹೊಸ ಸ್ಟೇಷನ್ ಗಳನ್ನು ತೆರೆಯಲಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ 8 ಸೈಬರ್ ಸ್ಟೇಷನ್ ತೆರೆಯಲಾಗಿದೆ. ಸೈಬರ್ ಸೆಲ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಕರ್ನಾಟಕದಲ್ಲಿ ಅತ್ಯಾಧುನಿಕ ಗ್ಯಾಜೆಟ್ ಮತ್ತು ಉಪಕರಣಗಳ ಡಿಜಿಟಲ್ ಲ್ಯಾಬ್ ಸೌಲಭ್ಯವಿರುವುದು ಮತ್ತು ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು 4ರಿಂದ 5 ಹಂತದ ತರಬೇತಿಯನ್ನು ಪ್ರತಿಷ್ಠಿತ ಸಂಸ್ಥೆಗಳಿಂದ ನೀಡಲಾಗುತ್ತಿದೆಯಂತೆ.
  ಡಿಜಿಟಲ್ ವ್ಯವಹಾರದ ಯುಗದಲ್ಲಿ ಜನರು ಹೆಚ್ಚು ಹೆಚ್ಚು ಜಾಗೃತೆಯಿಂದ ಇರುವುದೂ ಅತ್ಯಾವಶ್ಯಕ. ಜನರು ಎಚ್ಚರವಹಿಸಿದರೆ ಬಹುತೇಕ ಸೈಬರ್ ವಂಚನೆಯನ್ನು ನಡೆಯುವುದನ್ನು ತಡೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿ.

  ಡಿಜಿಟಲ್ ಇಂಡಿಯಾ ಯೋಜನೆಯನ್ನು ಲೇವಡಿ ಮಾಡುತ್ತಿದ್ದವರು ಇಂದು ಮಂಕಾಗಿದ್ದಾರೆ. ದೇಶದ ಹಣಕಾಸು ವ್ಯವಹಾರದ ಮುಖವು ವೇಗವಾಗಿ ಬದಲಾಗುತ್ತಿದೆ. ಡಿಜಿಟಲ್ ವಹಿವಾಟನ್ನು ಭಾರತೀಯರು ಕ್ಷಿಪ್ರ ವೇಗದಲ್ಲಿ ಅಳವಡಿಸಿಕೊಂಡು ವಿಶ್ವವೇ ಬೆರಗಾಗುವ ಹಾಗೆ ಡಿಜಿಟಲ್ ಕ್ರಾಂತಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಪ್ರಕಾಶ್ ಶೇಷರಾಘವಾಚಾರ್
  sprakashbjp@gmail.com

  Prakash Sesharaghavachar is a Joint Spokesperson of Karnataka BJP

  Disclaimer: The opinions expressed within this article are the personal opinions of the author. The facts and opinions appearing in the article do not reflect the views of TheBengaluruLive.com and Kannada.TheBengaluruLive.com does not assume any responsibility or liability for the same.

  bengaluru

  LEAVE A REPLY

  Please enter your comment!
  Please enter your name here