ಬೆಂಗಳೂರು:
ರಾಜ್ಯದಾದ್ಯಂತ ಸಡಗರ ಹಾಗೂ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಕೆಟ್ಟದನ್ನು ದಹಿಸಿ, ಒಳ್ಳೆಯದನ್ನು ಉಳಿಸಿಕೊಳ್ಳಿ ಎಂಬ ಸಂದೇಶ ಸಾರುವ ಈ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ. ನಮ್ಮೆಲ್ಲರ ಜೀವನಗಳಲ್ಲಿ ಆರೋಗ್ಯ, ಸಮೃದ್ಧಿ, ಸಂತಸ, ಸಂಭ್ರಮದ ಬಣ್ಣಗಳೇ ಸದಾ ತುಂಬಿರಲಿ ಎಂದು ಹೇಳಿದ್ದಾರೆ.
ಎರಡು ದಿನಗಳ ಕಾಲ ನಡೆಯುವ ಈ ಹೋಳಿ ಹಬ್ಬವು ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ‘ಹೋಲಿ ಕಾ ದಹನ್’ನೊಂದಿಗೆ ಪ್ರಾರಂಭವಾಗುತ್ತದೆ. ಮರುದಿನ ಹೋಳಿ ಹಬ್ಬದ ಮುಖ್ಯ ಆಚರಣೆಯ ಭಾಗವಾಗಿ ಜನರು ಬಣ್ಣಗಳನ್ನು ಎರಚಿ ಹೋಳಿ ಆಡುತ್ತಾರೆ.
ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಕಳೆದ ಎರಡು ವರ್ಷ ಹೋಳಿ ಸಂಭ್ರಮಾಚರಣೆ ಕಳೆಗುಂದಿತ್ತು. ಈ ಬಾರಿ ಪರಿಸ್ಥಿತಿ ಬಹುತೇಕ ಸುಧಾರಿಸಿರುವ ಕಾರಣ, ಎಲ್ಲೆಡೆ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತಿದೆ.