Home ಬೆಂಗಳೂರು ನಗರ ‘ಪೃಥ್ವಿ’ ಹೇಗೆ ಈ ಸಿನಿಮಾ ನನ್ನನ್ನು ಐ.ಎ.ಎಸ್. ಅನ್ನಾಗಿ ಮಾಡಿತು?

‘ಪೃಥ್ವಿ’ ಹೇಗೆ ಈ ಸಿನಿಮಾ ನನ್ನನ್ನು ಐ.ಎ.ಎಸ್. ಅನ್ನಾಗಿ ಮಾಡಿತು?

1139
0
bengaluru

ಡಾ.ಆಕಾಶ್.ಎಸ್. (IAS) ಅವರಿಂದ

ಅಕ್ಟೋಬರ್ 29, 2021 ಕನ್ನಡಿಗರ ಪಾಲಿಗೆ ಕತ್ತಲೆಯ ದಿನ ಎಂದರೆ ಬಹುಶಃ ತಪ್ಪಾಗುವುದಿಲ್ಲ. ಏಕೆಂದರೆ ನಮ್ಮೆಲ್ಲರ ಬಲು ನೆಚ್ಚಿನ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪುನೀತ್ ರಾಜಕುಮಾರ ನಮ್ಮನ್ನೆಲ್ಲಾ ಅಗಲಿದ ದಿನ. ಪುನೀತ್‍ರವರು ತಮ್ಮದೇ ವಿಭಿನ್ನ ಶೈಲಿಯಲ್ಲಿ ಕನ್ನಡಿಗರ ಮನೆ-ಮನದಾಳಗಳಲ್ಲಿ ಛಾಪನ್ನು ಮೂಡಿಸಿದ್ದಾರೆ. ಪುನೀತ್ ತಮ್ಮ ನಟನಾ ಕೌಶಲ್ಯದಿಂದ ಹಲವಾರು ಸಿನಿಮಾಗಳ ಮೂಲಕ ನಮ್ಮ ಮನಸ್ಸಿನ ಮೇಲೆ ಅಗಾಧವಾದ ಪ್ರಭಾವ ಬೀರಿದ್ದಾರೆ.

“ಬೆಟ್ಟದ ಹೂ” ಸಿನಿಮಾದಲ್ಲಿ ಶ್ರೀ ರಾಮಾಯಣ ದರ್ಶನಂ ಪುಸ್ತಕವನ್ನು ಬಡತನದ ಕಾರಣ ಖರೀದಿಸಲಾಗದ ಪುನೀತ್‍ರನ್ನು ಕಂಡು ಗಳಗಳನೆ ಅತ್ತ ದಿನಗಳೆಷ್ಟೋ. ಇದೇ ರೀತಿಯಲ್ಲಿ ನನ್ನ ಮೇಲೆ ಪ್ರಭಾವ ಬೀರಿದಂತಹ ಮತ್ತೊಂದು ಸಿನಿಮಾ ಎಂದರೆ ಅದು ‘ಪೃಥ್ವಿ’ ಈ ಸಿನಿಮಾ ನನ್ನನ್ನು ಐ.ಎ.ಎಸ್., ಅಧಿಕಾರಿ ಆಗುವಂತೆ ಮಾಡಿತು ಎಂದರೆ ತಪ್ಪಾಗುವುದಿಲ್ಲ.

ಅದು 2010 ರ ಜೂನ್ ತಿಂಗಳು, ನಾನು ನನ್ನ ವೈದ್ಯಕೀಯ ಶಿಕ್ಷಣದ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೆ. ನನ್ನ ಗೆಳೆಯನಾದ ಯತೀಶ್ ಅವರ ಸೋದರಿಯ ಮದುವೆಗೆ ಸ್ನೇಹಿತರೊಡನೆ ಮಂಡ್ಯಕ್ಕೆ ತೆರಳಿದ್ದೆವು. ಅಲ್ಲಿ ಸ್ವಲ್ಪ ಮುಂಚೆಯೇ ತಲುಪಿದ ನಮಗೆ ಸಿನಿಮಾ ನೋಡಿ ಕಾಲ ಕಳೆಯುವ ಯೋಚನೆ ಹೊಳೆಯಿತು. ನಂತರ ನಾನು ಸರಿಯಾಗಿ ನೆನಪಿಸಿಕೊಳ್ಳುವುದಾದರೆ, ‘ಸಂಜಯ’ ಎಂಬ ಥಿಯೇಟರ್‍ಗೆ ತೆರಳಿ ಟಿಕೇಟ್ ಖರೀದಿಸಲು ಮುಂದಾದೆವು. ಎರಡನೇ ಯೋಜನೆ ಇಲ್ಲದೆ ಖರೀದಿಸಿ ಥಿಯೇಟರ್ ಒಳಕ್ಕೆ ತೆರಳಿದೆವು. ಏಕೆಂದರೆ ಪ್ರದರ್ಶನವಾಗುತ್ತಿದ್ದುದು ಪುನೀತ್‍ರವರ ‘ಪೃಥ್ವಿ’ ಸಿನಿಮಾ. ಅಪ್ಪುರವರ ಸಿನಿಮಾ ಎಂದರೆ ಯಾವ ಸಂದೇಹವೂ ಇರದೆ ನೋಡಬಹುದಾದ ಸಿನಿಮಾಗಳಾಗಿರುತ್ತವೆ.

Also Read: How ‘Prithvi’ influenced a young Kannadiga to join civil services

ದಿಟ್ಟ ಐ.ಎ.ಎಸ್. ಅಧಿಕಾರಿಯಾಗಿ ಪುನೀತ್‍ರ ನಟನೆ ನಿಜಕ್ಕೂ ಅದ್ಭುತವಾಗಿತ್ತು. ಬಳ್ಳಾರಿಯ ಅಕ್ರಮ ಗಣಿಗಾರಿಕೆ ಕುರಿತಂಥ ಈ ಸಿನಿಮಾ ಎಲ್ಲರ ಮೆಚ್ಚುಗೆ ಪಡೆದುಕೊಂಡಿತ್ತು. ಪುನೀತ್‍ರವರ ಹಾವ-ಭಾವ, ಅವರ ಮಾತುಗಾರಿಕೆ, ಬಿಳಿ ಅಂಗಿ, ತೋಳು-ಮಡಿಸುತ್ತಿದ್ದಂತಹ ಪರಿ ಇವೆಲ್ಲವೂ ನನ್ನನ್ನು ಬೆರಗಾಗಿಸಿತ್ತು. ಕೆಳವರ್ಗದ ಸಿಬ್ಬಂದಿಗಳನ್ನು ಸಹ ಅತ್ಯಂತ ಆತ್ಮೀಯತೆ ಹಾಗೂ ಗೌರವದಿಂದ ಕಾಣುತ್ತಿದ್ದ ಆ ನಟನೆ ಅಸಾಮಾನ್ಯ. ಎಲ್ಲವನ್ನೂ ಮೀರಿ, ಈ ಸಿನಿಮಾ ನನ್ನ ಭವಿಷ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಹಿರಿಯ ಹುದ್ದೆಗಳ ಗಂಧ-ಗಾಳಿ ತಿಳಿಯದಂತಹ ಮಧ್ಯಮ ವರ್ಗದ ನಮ್ಮಂಥವರಿಗೆ ಐ.ಎ.ಎಸ್. ಕುರಿತಾದ ಕಿಚ್ಚು ಯಾವ ಮಾರ್ಗದಲ್ಲಿ ಹೊತ್ತಿದರೂ, ಅದು ಸ್ವಾಗತಾರ್ಹವಲ್ಲವೇ?

IAS officer Dr Akash in Ballari

ಪೃಥ್ವಿಯಲ್ಲಿ ಅಂಥದ್ದೇನನ್ನು ಕಂಡೆ ಎಂದು ಹೇಳುವುದಾದರೆ ಬಹಳಷ್ಟು ಅಂಶಗಳನ್ನು ಪಟ್ಟಿ ಮಾಡಬಹುದು. ಪೃಥ್ವಿ ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಮನೆಮಗನಾಗಿ ಉತ್ತಮ ನಡವಳಿಕೆ ಹೊಂದಿರುತ್ತಾನೆ. ಎಷ್ಟೇ ಎತ್ತರಕ್ಕೇರಿದರೂ ಸಿನಿಮಾದಲ್ಲಿ ಒಂದು ರಾಯಲ್ ಎನ್‍ಫೇಲ್ಡ್ ಗಾಡಿಯನ್ನೇ ಚಲಾಯಿಸುತ್ತಾನೆ. ಅಹಂಕಾರ, ಅಹಂ ಎನ್ನುವ ಭಾವನೆಗಳೇ ಇಲ್ಲದಂತಹ ಸತ್ಪುರುಷ ಪೃಥ್ವಿ. ಬಡವರು –ತಳಮಟ್ಟದ ಜನರ ಮೇಲೆ ಕಳಕಳಿ ಉಳ್ಳ ಅಧಿಕಾರಿಯಾಗಿರುತ್ತಾನೆ. ಈ ಎಲ್ಲಾ ಅಂಶಗಳನ್ನು ಆಡಳಿತದ ಭಾಷೆಯಲ್ಲಿ ಒ.ಎಲ್.ಕ್ಯೂ. (ಆಫೀಸರ್ ಲೈಕ್ ಕ್ವಾಲಿಟೀಸ್) ಎಂದು ಸಾಮಾನ್ಯವಾಗಿ ಬಳಸಲಾಗುತ್ತದೆ.

ಆದರೆ, ಪುನೀತ್‍ರ ಪಾತ್ರಾಭಿನಯ ಈ ಎಲ್ಲಾ ಗುಣಗಳನ್ನು ಮೀರುವಂತಿದೆ. ಚಿಕ್ಕವಯಸ್ಸಿನಿಂದಲೂ ಆಡಳಿತ ಸೇವೆಗಳ ಮೇಲೆ ಒಲವಿತ್ತಾದೂ, ಪರೀಕ್ಷೆಯ ಹಾಗೂ ಹುದ್ದೆಯ ಕುರಿತಾದ ಜ್ಞಾನ ಮಾತ್ರ ಕಿಂಚಿತ್ತು ಇರಲಿಲ್ಲ. ಒಬ್ಬ ಐ.ಎ.ಎಸ್. ಅಧಿಕಾರಿಯನ್ನು ಎಂದೂ ನಿಜಜೀವನದಲ್ಲಿ ಕಾಣದ ನಮ್ಮ ಬದುಕಿನಲ್ಲಿ ಪೃಥ್ವಿಯ ಪಾತ್ರಕ್ಕೆ ಜೀವ ತುಂಬಿದ ಪುನೀತ್‍ರವರೆ ಆಕರ್ಷಣೆ.

ಆದರೆ, ನಿಜಜೀವನದಲ್ಲಿಯೂ ಸಹ ಒಬ್ಬ ಐ.ಎ.ಎಸ್. ಅಧಿಕಾರಿ ಈ ರೀತಿಯಲ್ಲಿ ಬದುಕಲು ಸಾಧ್ಯವೇ? ಈ ಪ್ರಶ್ನೆಗೆ ಕಾರ್ಯರೂಪದಲ್ಲಿ ಇಂದು ಅನುಭವವಾಗಿದ್ದರೂ ಸಹ, ಪುನೀತ್‍ರ ಆ ಪಾತ್ರದಿಂದ ಕಲಿಯುವುದು ಬಹಳಷ್ಟಿದೆ. ಎಷ್ಟೇ ಕಲಿತರೂ, ವಿನಯ ಇಲ್ಲದ ವಿದ್ಯೆ ಕಸಕ್ಕೆ ಸಮಾನ. ಎಷ್ಟೇ ಬೆಳೆದರೂ ತಗ್ಗಿ-ಬಗ್ಗಿ ಸದಾ ಕೃತಜ್ಞ ಭಾವನೆ ಬೆಳೆಸಿಕೊಳ್ಳದಿದ್ದರೆ, ಆ ಬೆಳವಣಿಗೆಗೆ ಬೆಲೆ ಇರುವುದಿಲ್ಲ. ತನ್ನ ಮನೆಯಲ್ಲಿ ಕೆಲಸ ಮಾಡುವ ಆಳಿನೊಡನೆಯಾದರೂ ಸರಿಯೆ ಅಥವಾ ತನ್ನ ವಾಹನ ಚಾಲಕನಾದರೂ ಸರಿಯೆ, ಎಲ್ಲರನ್ನೂ ಪ್ರೀತಿ-ಗೌರವದಿಂದ ಕಾಣುವ ಆ ಸರಳತೆ-ಸಜ್ಜನಿಕೆ ಬೆಳಿಸಿಕೊಳ್ಳಬೇಕೇ ಆಗಿರುವ ಮೌಲ್ಯಗಳು. ಇದನ್ನು ನಾನು ‘ಪೃಥ್ವಿ’ಯಲ್ಲಿ ಕಂಡೆ ಎಂದರೆ ಅದು ಉತ್ಪ್ರೇಕ್ಷೆಯಾಗದು.

ನನ್ನ 06ನೇ ಪ್ರಯತ್ನದಲ್ಲಿ ನಾನು ಭಾರತೀಯ ಆಡಳಿತ ಸೇವೆ(ಐ.ಎ.ಎಸ್) ಆಗಿ 2019 ರಲ್ಲಿ ಆಯ್ಕೆಯಾದೆ. ದೈವೇಚ್ಚೆ ಎಂಬಂತೆ ನನ್ನ ತಾಯ್ನಾಡಾದ ಕರ್ನಾಟಕದಲ್ಲೇ ನನ್ನ ಸೇವೆ ಎಂದು ಅದೇ ವರ್ಷ ನಿರ್ಧಾರ ಕೂಡ ಆಯಿತು. ಇಂದು ನಾನು ಸಹಾಯಕ ಆಯುಕ್ತ (ಅಸಿಸ್ಟೆಂಟ್ ಕಮೀಷನರ್) ಆಗಿ ಬಳ್ಳಾರಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಅಂದು ನನ್ನೊಡನೆ ಪೃಥ್ವಿ ಸಿನಿಮಾ ನೋಡಿದ ನನ್ನ ಗೆಳೆಯ ಡಾ.ಧೀರಜ್ ಶ್ಯಾಮ್ ಇಂದು ಬಳ್ಳಾರಿ ಜಿಲ್ಲೆಯಲ್ಲೇ ನನ್ನ

ಕಾರ್ಯಾರಂಭವಾಗಿರುವುದನ್ನು ಕಂಡು ‘ನಂಬಲಾರೇ’ ಎಂದು ವರ್ಣಿಸುವುದುಂಟು. ಇದಕ್ಕೆ ನಾನು, ಎಲ್ಲಾ ಆ ಭಗವಂತನ ಆಟ ಎಂದೇ ಹೇಳಲು ಸಾಧ್ಯ. ನನ್ನಂತೆಯೇ ಐ.ಎ.ಎಸ್. ಆಗಲು ಪೂರಕವಾದ ಸ್ಫೂರ್ತಿಯಾಗಿದ್ದಕ್ಕಾಗಿ ಪುನೀತ್‍ರವರಿಗೆ ನಾನಷ್ಟೇ ಅಲ್ಲದೆ, ನನ್ನ ಗೆಳೆಯರಾದ ಹಾಗೂ ಕನ್ನಡಿಗರೇ ಆದ ಡಾ.ಗೋಪಾಲಕೃಷ್ಣ (ಐ.ಎ.ಎಸ್) ಹಾಗೂ ಡಾ.ನಾಗರ್ಜುನಗೌಡ (ಐ.ಎ.ಎಸ್)ಇವರುಗಳೂ ಸಹ ಧನ್ಯವಾದಗಳನ್ನು ಹೇಳಬಯಸುತ್ತಾರೆ.

ಡಾ||ರಾಜ್‍ಕುಮಾರ್‍ರ ಕುಟುಂಬ ಎಂದರೆ ಅದು ಸರಳತೆ-ಸಜ್ಜನಿಕೆಗೆ ಮೊದಲಿನಿಂದಲೂ ಹೆಸರುವಾಸಿಯಾಗಿರುವ ಮನೆತನ. ಈ ಮೌಲ್ಯಗಳು ಪ್ರಾಯಶಃ ರಕ್ತಗತವಾಗಿದೆಯೇನೋ ಎಂದರೆ ಅತಿಶಯವಾಗಲಾರದು. ಡಾ.ರಾಜ್ಕುಮರ್‍ರ ಮೊಮ್ಮಗರಾದ ಗುರು ರಾಘವೇಂದ್ರರವರು ಸಹ ನನ್ನ ಸ್ನೇಹಿತರಾದ್ದರಿಂದ, ಈ ಗುಣವನ್ನು ಅವರಲ್ಲಿಯೂ ಸಹ ಕಾಣಬಲ್ಲೆ. ಈ ಕುಟುಂಬವು ಡಾ.ರಾಜ್‍ಕುಮಾರ್ ಅಕಾಡೆಮಿಯ ಹೆಸರಿನಲ್ಲಿ ನಾಡಿನ ಹಲವಾರು ಯುವಕರಿಗೆ ಮಾರ್ಗದರ್ಶನ ನೀಡುತ್ತಿದೆ. ದೇಶದ ಸಮಸ್ತ ಯುವ ಬಳಗಕ್ಕೆ ಉತ್ತಮ ಮಾರ್ಗದರ್ಶನ ದೊರೆತು ಒಳ್ಳೆ ಸಾಧಕರಾಗಬೆಕೆಂದು ಹಾರೈಸುತ್ತೇನೆ.

ಇಂದು ಪುನೀತ್‍ರವರು ನಮ್ಮೊಂದಿಗಿಲ್ಲ. ಅವರಿಲ್ಲದ ರಾಜ್ಯೋತ್ಸವ ಏಕೋ ಈ ಬಾರಿ ನನಗೆ ಮಂಕಾಗಿ ತೋರಿತು. ಮನಸಾರೆ ಎಲ್ಲರೂ ಇಷ್ಟಪಡುವ ಸಹೃದಯಿ, ಸರಳ ಜೀವಿ, ಅಪ್ರತಿಮ ಪ್ರತಿಭೆ. ಪುನೀತ್‍ರವರ ನಿಧನ ನಾಡಿಗೆ ತುಂಬಲಾರದ ನಷ್ಟ. ಆದರೆ, ಅವರು ನಮ್ಮ ಮನದಾಳದಲ್ಲಿ ಸದಾ ನಗುತ್ತಿರುತ್ತಾರೆ. ನನ್ನ ಮಾತು ಮುಗಿಸುವ ಮುನ್ನ ಆ ದೇವರಲ್ಲಿ ಪ್ರಾರ್ಥಿಸುವುದೇನೆಂದರೆ, ಅವರೆಲ್ಲೇ ಇದ್ದರೂ ಆ ನಗು ಹಾಗೆಯೇ ಇರುವಂತಾಗಲಿ.

ಡಾ ಆಕಾಶ್ 2019 ರ ಬ್ಯಾಚ್ ಐಎಎಸ್ ಅಧಿಕಾರಿ ಮತ್ತು ಪ್ರಸ್ತುತ ಬಳ್ಳಾರಿಯ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here